ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನಾಲ್ಕು ಮಂದಿ ಕಾರ್ಮೆಲೈಟ್ ಗುರುಗಳಿಗೆ ಪವಿತ್ರ ಗುರುದೀಕ್ಷೆ

ಮಂಗಳೂರು: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಗುರುವಾರ(ಮೇ 14) ನಡೆದ ಭವ್ಯ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ನಾಲ್ವರು ಡಿಸ್ಕಾಲ್ಡ್ ಕಾರ್ಮೆಲೈಟ್ ಡೀಕನ್‌ಗಳಾದ ವಂ. ಆಲ್ವಿನ್ ಡಿಸೋಜಾ, ವಂ. ಲೋಯ್ ಜಾಕ್ಸನ್ ಕ್ರಾಸ್ತಾ, ವಂ. ಎಲ್ಸ್ಟನ್ ಮೊಂತೇರೊ ಮತ್ತು ವಂ.ಹಿಲರಿ ರೊಡ್ರಿಗಸ್ ಅವರಿಗೆ ಪವಿತ್ರ ಗುರುದೀಕ್ಷೆ ನೀಡಿದರು.

ಈ ಸಂದರ್ಭದಲ್ಲಿ ಪ್ರವಚನ ನೀಡಿದ ಬಿಷಪ್ ಅವರು, ಗುರುತ್ವವು ಮಾನವಕುಲದ ರಕ್ಷಣೆಗಾಗಿ ತನ್ನನ್ನೇ ಅರ್ಪಿಸಿಕೊಂಡ ದೇವಕುರಿ ಯೇಸುಕ್ರಿಸ್ತರನ್ನು ಅನುಕರಿಸುವ ಕರೆಯಾಗಿದ್ದು, ಪ್ರತಿಯೊಬ್ಬ ಗುರುವು ಬಲಿಪೀಠದ ಮುಂದೆ “ಯಾಜಕ ಮತ್ತು ಬಲಿಪಶು” ಆಗಿ ತನ್ನ ಜೀವನವನ್ನೇ ಬಲಿದಾನವಾಗಿ ಅರ್ಪಿಸಬೇಕು ಎಂದು ಕರೆ ನೀಡಿದರು. ಸಂತ ಪಾದ್ರೆ ಪಿಯೋ ಅವರ ಉದಾಹರಣೆಯನ್ನು ನೀಡುತ್ತಾ, ಗುರುಗಳು ಜನರೊಂದಿಗೆ ನಿಕಟವಾಗಿರಬೇಕು ಮತ್ತು ಪ್ರವಾದಿ ಎಲಿಜಾರಂತೆ ದೈವಿಕ ಉತ್ಸಾಹದೊಂದಿಗೆ ಆಧುನಿಕ ಕಾಲದ ಸುಗಮ ಮಾರ್ಗಗಳನ್ನು ಬಳಸಿ ಸುಸಂದೇಶ ಸಾರಬೇಕು ಎಂದು ಬಿಷಪ್ ಆಶಿಸಿದರು.

ಇದೇ ಅವಧಿಯಲ್ಲಿ ಕರ್ನಾಟಕ-ಗೋವಾ ಪ್ರಾಂತ್ಯದ ಇತರ ಇಬ್ಬರು ಕಾರ್ಮೆಲೈಟ್ ವಟುಗಳು ತಮ್ಮ ಸ್ವಂತ ಧರ್ಮಕ್ಷೇತ್ರಗಳಲ್ಲಿ ಗುರುದೀಕ್ಷೆ ಪಡೆದರು; ವಂ. ರುಬನ್ ಕೆ.ವಿ. ಅವರು ಮೇ 10ರಂದು ಕೊಡಗಿನ ಸಿದ್ದಾಪುರದಲ್ಲಿ ಹಾಗೂ ವಂ. ಸ್ಟಿನ್ ಜಾರ್ಜ್ ಅವರು ಮೇ 11ರಂದು ಸುಂಟಿಕೊಪ್ಪದಲ್ಲಿ ಬಿಷಪ್ ಹೆನ್ರಿ ಡಿಸೋಜಾ ಅವರಿಂದ ಅಭಿಷೇಕಿಸಲ್ಪಟ್ಟರು. ಸುಮಾರು 130 ಪುರೋಹಿತರು, ಧರ್ಮಭಗಿನಿಯರು ಮತ್ತು ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದ ಬಿಕರ್ನಕಟ್ಟೆಯ ಈ ಸಮಾರಂಭದಲ್ಲಿ, ನೂತನ ಪ್ರಾಂತೀಯ ಅಧಿಕಾರಿ ವಂ. ಜಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಬಿಷಪ್‌ರಿಗೆ ಮತ್ತು ಮಕ್ಕಳನ್ನು ಸಭೆಗೆ ಅರ್ಪಿಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ನಂತರ ನಡೆದ ಸನ್ಮಾನ ವಿಧಿಯಲ್ಲಿ ನೂತನ ಗುರುಗಳನ್ನು ಗೌರವಿಸಲಾಯಿತು. ವಂ. ಪ್ರಿತೇಶ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು, ಪುಣ್ಯಕ್ಷೇತ್ರದ ನಿರ್ದೇಶಕ ವಂ. ಸ್ಟಿಫನ್ ಪಿರೇರಾ ವಂದನಾರ್ಪಣೆ ಮಾಡಿದರು.

error: Content is protected !!