
ನವದೆಹಲಿ: ನಿಂತಿದ್ದ ಸ್ಲೀಪರ್ ಬಸ್ಸಿನೊಳಗೆ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಇಂದು(ಮೇ 14) ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಘಟನೆಯು ಸೋಮವಾರ(ಮೇ 11) ರಾತ್ರಿ ರಾಣಿ ಬಾಗ್ ಪ್ರದೇಶದಲ್ಲಿ ನಡೆದಿದ್ದು, ಪೀತಾಂಬರ ಸಮೀಪದ ಕೊಳೆಗೇರಿ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ, ಮಂಗೋಲಪುರಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದು ರಾತ್ರಿ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸರಸ್ವತಿ ವಿಹಾರ್ ಬಸ್ ನಿಲ್ದಾಣದ ಬಳಿ ನಿಂತಿದ್ದ ಸ್ಲೀಪರ್ ಬಸ್ಸಿನ ಬಳಿ ಹೋಗಿ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯನ್ನು ಸಮಯ ಕೇಳಲು ಮಹಿಳೆ ಮಾತನಾಡಿಸಿದ್ದಾರೆ. ಈ ವೇಳೆ ಆರೋಪಿಗಳು ಆಕೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದುಕೊಂಡಿದ್ದಾರೆ. ನಂತರ ಬಸ್ಸನ್ನು ನಂಗ್ಲೋಯಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಅಲ್ಲಿ ಈ ಅಮಾನವೀಯ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಕೃತ್ಯಕ್ಕೆ ಬಳಸಲಾದ ಸ್ಲೀಪರ್ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡು, ಮೂವರು ಮಕ್ಕಳ ತಾಯಿಯಾಗಿರುವ ಸಂತ್ರಸ್ತ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಎಲ್ಲಾ ಆಯಾಮಗಳಿಂದಲೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.