ಲಕ್ನೋ: ಉತ್ತರ ಪ್ರದೇಶದಾದ್ಯಂತ ಬೀಸಿದ ಭೀಕರ ಧೂಳಿನ ಬಿರುಗಾಳಿ, ಗುಡುಗು ಸಹಿತ ಮಳೆ ಮತ್ತು ಸಿಡಿಲಿಗೆ ಬಲಿಯಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಬರೇಲಿಯಲ್ಲಿ ಬಿರುಗಾಳಿಯ ರೌದ್ರಾವತಾರಕ್ಕೆ ಯುವಕನೊಬ್ಬ ತಗಡಿನ ಶೆಡ್‌ನೊಂದಿಗೆ ಸುಮಾರು 45 ಅಡಿ ಎತ್ತರಕ್ಕೆ ಹಾರಿ, 100 ಮೀಟರ್ ದೂರದ ಹೊಲದಲ್ಲಿ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.






ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾವು-ನೋವುಗಳು ವರದಿಯಾಗಿದ್ದು, ಮುಖ್ಯವಾಗಿ ಪ್ರಯಾಗ್‌ರಾಜ್ ಮತ್ತು ಭದೋಹಿ ಜಿಲ್ಲೆಗಳಲ್ಲಿ ತಲಾ 17 ಮಂದಿ ಮೃತಪಟ್ಟಿದ್ದಾರೆ. ಮಿರ್ಜಾಪುರದಲ್ಲಿ 15, ಫತೇಪುರದಲ್ಲಿ 9 ಮತ್ತು ಬದೌನ್‌ನಲ್ಲಿ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿರುಗಾಳಿಯ ತೀವ್ರತೆಗೆ ಮರಗಳು ಉರುಳಿ ಬಿದ್ದಿರುವುದು ಮತ್ತು ಗೋಡೆ ಕುಸಿದಿರುವುದು ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ.

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಯಾತ್ರಿಕರಿಗಾಗಿ ನಿರ್ಮಿಸಲಾಗಿದ್ದ ನೂರಾರು ಗುಡಿಸಲುಗಳು ಹಾರಿಹೋಗಿವೆ. ಉನ್ನಾವೋ ಮತ್ತು ಗೊಂಡಾ ಜಿಲ್ಲೆಗಳಲ್ಲಿ ಬೃಹತ್ ಬೇವು ಮತ್ತು ಇತರ ಮರಗಳು ಕಾರುಗಳ ಮೇಲೆ ಬಿದ್ದು ವಾಹನಗಳು ಸಂಪೂರ್ಣ ಜಖಂಗೊಂಡಿವೆ.

ರಾಜ್ಯದ ಸುಮಾರು 2,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದೇವೋರಿಯಾ, ಬಾರಾಬಂಕಿ ಮತ್ತು ಸೀತಾಪುರ ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ಹಾನಿಗೊಳಗಾಗಿದ್ದು, ಪುನಃಸ್ಥಾಪನಾ ಕಾರ್ಯಗಳು ನಡೆಯುತ್ತಿವೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಸಂಚಾರ ವ್ಯವಸ್ಥೆಯೂ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮಥುರಾ ಮತ್ತು ಪ್ರಯಾಗ್‌ರಾಜ್ ಭಾಗಗಳಲ್ಲಿ ಭಾರಿ ಗಾತ್ರದ ಆಲಿಕಲ್ಲು ಮಳೆ ಸುರಿದಿದೆ.

ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ
ಒಂದು ಕಡೆ ಚಂಡಮಾರುತದ ಅಬ್ಬರವಿದ್ದರೆ, ಮತ್ತೊಂದೆಡೆ ಬಂದಾ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 45.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಲಕ್ನೋ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಪಶ್ಚಿಮದ ಮಾರುತಗಳ ಪ್ರಭಾವ ಕಡಿಮೆಯಾಗುತ್ತಿದ್ದು, ಮೇ 15 ರಿಂದ ಹವಾಮಾನವು ತಿಳಿಯಾಗಲಿದೆ. ಆದರೆ, ಮೇ 16 ರಿಂದ ರಾಜ್ಯದ ಹಲವು ಭಾಗಗಳಲ್ಲಿ, ವಿಶೇಷವಾಗಿ ಬುಂದೇಲ್‌ಖಂಡ್ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಬಿಸಿಗಾಳಿ (Heatwave) ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.