ದಳಪತಿ ವಿಜಯ್ ಪಟ್ಟಾಭಿಷೇಕದ ಬೆನ್ನಲ್ಲೇ ಜೋಯಿಸನಿಗೆ ಗೇಟ್ ಪಾಸ್: ತಮಿಳುನಾಡಿನ ಅಖಾಡದಲ್ಲಿ ರಾಧನ್ ಪಂಡಿತ್ ಕಥೆ ಮುಗೀತಾ?

ಚೆನ್ನೈ: ತಮಿಳುನಾಡಿನ ರಾಜಕೀಯ ರಣರಂಗದಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ನಡೆದ ಹೈಡ್ರಾಮಾಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅತ್ತ ಅಸೆಂಬ್ಲಿಯಲ್ಲಿ 144 ಮತಗಳೊಂದಿಗೆ ಬಹುಮತ ಸಾಬೀತುಪಡಿಸಿ ದಳಪತಿ ವಿಜಯ್ ವಿಜಯನಗುರಿ ಬಾರಿಸುತ್ತಿದ್ದಂತೆ, ಇತ್ತ ತಮ್ಮ ನೆಚ್ಚಿನ ಜ್ಯೋತಿಷಿಗೆ ನೀಡಿದ್ದ ʻಸ್ಪೆಷಲ್ ಆಫೀಸರ್’ ಪಟ್ಟವನ್ನು ಕಸಿದುಕೊಂಡು ಮನೆಗೆ ಕಳುಹಿಸಿದ್ದಾರೆ!

ಯಾರು ಈ ರಾಧನ್ ಪಂಡಿತ್?
ಈ ರಾಧನ್ ಪಂಡಿತ್ ವೆಟ್ರಿವೇಲ್ ಅಂತಿಂಥಾ ಆಸಾಮಿಯಲ್ಲ. ಅಮ್ಮ ಜಯಲಲಿತಾ ಕಾಲದಲ್ಲೇ ಪವರ್ ಫುಲ್ ಆಗಿದ್ದ ಇವರು, ಜಯಲಲಿತಾ ಜೈಲಿಗೆ ಹೋಗಲ್ಲ ಅಂತ ಭವಿಷ್ಯ ಹೇಳಿ ಫ್ಲಾಪ್ ಆಗಿದ್ದವರು. ಆದರೆ ವಿಜಯ್ ಮುಖ್ಯಮಂತ್ರಿಯಾಗ್ತಾರೆ ಅಂತ ಭವಿಷ್ಯ ನುಡಿದಿದ್ದೇ ಈ ಪಂಡಿತ್. ವಿಜಯ್ ಪ್ರಮಾಣವಚನ ಸ್ವೀಕರಿಸುವ ಮುಹೂರ್ತವನ್ನೂ ಬದಲಾಯಿಸಿದ್ದ ಈ ದೈವಜ್ಞನನ್ನು ವಿಜಯ್ ತಮ್ಮ ರಾಜಕೀಯ ಸಲಹೆಗಾರನನ್ನಾಗಿ ನೇಮಿಸಿಕೊಂಡಿದ್ದರು.

ವಿಜಯ್ ಅವರ ಈ ಜ್ಯೋತಿಷ್ಯ ಪ್ರೇಮ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ವಿ.ಸಿ.ಕೆ (VCK) ಗೆ ನುಂಗಲಾರದ ತುತ್ತಾಗಿತ್ತು. “ಜೋಯಿಸನಿಗೆ ಸರ್ಕಾರದಲ್ಲಿ ಓ.ಎಸ್.ಡಿ ಹುದ್ದೆ ಯಾಕೆ?” ಅಂತ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಪ್ರಶ್ನಿಸಿದರೆ, “ವೈಜ್ಞಾನಿಕ ಮನೋಭಾವದ ಸರ್ಕಾರದಲ್ಲಿ ಇಂತವರಿಗೆ ಜಾಗವಿಲ್ಲ” ಅಂತ ಮಿತ್ರಪಕ್ಷಗಳು ಗುಡುಗಿದ್ದವು. ಇನ್ನು ಪ್ರತಿಪಕ್ಷ ನಾಯಕಿ ಪ್ರೇಮಲತಾ ವಿಜಯಕಾಂತ್ ಅಂತೂ “ನಿಮ್ಮ ಜ್ಯೋತಿಷಿಯನ್ನು ಮನೆಯಲ್ಲಿಟ್ಟುಕೊಳ್ಳಿ, ಸರ್ಕಾರಕ್ಕಲ್ಲ” ಅಂತ ಅಸೆಂಬ್ಲಿಯಲ್ಲೇ ಅಬ್ಬರಿಸಿದ್ದರು.

ಸದ್ಯಕ್ಕೆ ಮಿತ್ರಪಕ್ಷಗಳ ಬೆಂಬಲವಿಲ್ಲದೆ ಸರ್ಕಾರ ನಡೆಯಲ್ಲ ಎಂಬ ಕಟು ಸತ್ಯ ವಿಜಯ್ ಅವರಿಗೆ ಅರ್ಥವಾದಂತಿದೆ. ಟಿವಿಕೆ (TVK) ನಾಯಕರು ಈ ಮೊದಲು “ಪಂಡಿತ್ ಕೇವಲ ಮೀಡಿಯಾ ಹ್ಯಾಂಡ್ಲರ್” ಅಂತ ಸಮರ್ಥಿಸಿಕೊಂಡಿದ್ದರೂ, ವಿರೋಧದ ಅಲೆ ಜೋರಾದ ಬೆನ್ನಲ್ಲೇ ಅವರ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ.

ರಾಜಕೀಯದಲ್ಲಿ ಗ್ರಹಗತಿಗಳಿಗಿಂತ ಮಿತ್ರಪಕ್ಷಗಳ ಗತಿ ಮುಖ್ಯ ಅನ್ನೋದು ದಳಪತಿಗೆ ಅಧಿಕಾರಕ್ಕೆ ಬಂದ ಮೊದಲ ದಿನವೇ ಅರ್ಥವಾಗಿದೆ. ಪಂಡಿತ್ ಸಾಹೇಬರು ವಿಜಯ್ ಸಿಎಂ ಆಗ್ತಾರೆ ಅನ್ನೋದನ್ನೇನೋ ಸರಿಯಾಗಿ ಗೆಸ್ ಮಾಡಿದ್ರು, ಆದ್ರೆ ತಮ್ಮ ಕೆಲಸವೇ ಹೋಗುತ್ತೆ ಅನ್ನೋದನ್ನ ಮಾತ್ರ ಅವರ ಗ್ರಹಗಳು ಹೇಳಲಿಲ್ಲ ಅನಿಸುತ್ತಿದೆ.

error: Content is protected !!