22 ಲಕ್ಷ ವಿದ್ಯಾರ್ಥಿಗಳ ಬದುಕನ್ನು ನೀಟಾಗಿ ಬೀದಿಗೆ ತಂದ ‘ಶುಭಂ’ ಎಂಬ ರಾಕ್ಷಸ!

ಅವನು ನೋಡೋಕೆ ಒಬ್ಬ ಸಾಧಾರಣ ಬಿಎಎಂಎಸ್ (BAMS) ವಿದ್ಯಾರ್ಥಿ. ಹೆಸರೇನೋ ‘ಶುಭಂ’. ಆದರೆ ಇವನು ಮಾಡಿರೋ ಕೆಲಸ ಮಾತ್ರ ಈ ದೇಶದ 22 ಲಕ್ಷ ಬಡ ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ಅಮಂಗಳ!

ಈ ದೇಶದ ವೈದ್ಯಕೀಯ ಲೋಕದ ಭವಿಷ್ಯವನ್ನೇ ಹರಾಜಿಗೆ ಇಟ್ಟಿರೋ ಈ ನೀಟ್ (NEET) ಹಗರಣದ ಕಥೆ ಶುರುವಾಗೋದು ಮಹಾರಾಷ್ಟ್ರದ ನಾಸಿಕ್‌ನಲ್ಲಿ. ಈ ಶುಭಂ ಖೈರ್ನಾರ್ ಎನ್ನುವ ಆಸಾಮಿ ಪುಣೆಯ ಒಬ್ಬ ಏಜೆಂಟ್‌ನಿಂದ 10 ಲಕ್ಷಕ್ಕೆ ನೀಟ್ ಪ್ರಶ್ನೆಪತ್ರಿಕೆ ಖರೀದಿ ಮಾಡ್ತಾನೆ. ತನ್ನ ಜೇಬಿಗೆ ಬರಿ 5 ಲಕ್ಷ ಲಾಭ ಬೀಳುತ್ತೆ ಅನ್ನೋ ಕಾರಣಕ್ಕೆ, ದೇಶದ ಭವಿಷ್ಯವನ್ನೇ ಹರಿಯಾಣದ ಗ್ಯಾಂಗ್‌ಗೆ 15 ಲಕ್ಷಕ್ಕೆ ಮಾರ್ಕೊಂಡು ಬಿಡ್ತಾನೆ.

ಕಟಿಂಗ್ ಮಾಡಿಸಿಕೊಂಡು, ವೇಷ ಬದಲಿಸಿ ಸಿಬಿಐ ಕಣ್ಣಿಗೆ ಮಣ್ಣೆರಚೋಕೆ ಈತ ಪ್ಲಾನ್ ಮಾಡಿದ್ದ. ಆದರೆ ಪಾಪ, ಮಾಡಿರೋ ಪಾಪದ ಕೊಡ ತುಂಬಿತ್ತು. ಮಂಗಳವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬರೋಣ ಅಂತ ಹೊರಟಿದ್ದ ಈ ಅಕ್ರಮದ ರಾಜಕುಮಾರನನ್ನು ಸಿಬಿಐ ಹದ್ದು ಮುಚ್ಚಿದಂತೆ ಎತ್ತಿಕೊಂಡಿದೆ. ಅಲ್ಲಿಗೆ ಈತನ ಕಳ್ಳಾಟಕ್ಕೆ ಬ್ರೇಕ್ ಬಿತ್ತು.

ಇತ್ತ ರಾಜಸ್ಥಾನದ ಸಿಕರ್ ಇದೆಯಲ್ಲ, ಅದೀಗ ಕೋಚಿಂಗ್ ಹಬ್ ಆಗಿ ಉಳಿದಿಲ್ಲ, ಅದೊಂದು ಸೀಟುಗಳ ಸಂತೆಯಾಗಿ ಬದಲಾಗಿದೆ. ಪರೀಕ್ಷೆಗೆ ಬರೋಬ್ಬರಿ 45 ಗಂಟೆಗಳ ಮೊದಲೇ ಪ್ರಶ್ನೆಪತ್ರಿಕೆ ಪಿಡಿಎಫ್ ರೂಪದಲ್ಲಿ ವಾಟ್ಸಾಪ್, ಟೆಲಿಗ್ರಾಮ್‌ಗಳಲ್ಲಿ ಹರಿದಾಡುತ್ತಿತ್ತು ಅಂದ್ರೆ ನೀವೇ ಯೋಚನೆ ಮಾಡಿ. ಈ ಹಗರಣದ ಬೇರು ಎಷ್ಟು ಆಳಕ್ಕಿಳಿದಿದೆ ಅಂದ್ರೆ, ಒಬ್ಬ ಹಾಸ್ಟೆಲ್ ಮಾಲೀಕ ದೂರು ಕೊಡೋಕೆ ಹೋದ್ರೂ ಸಿಕರ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳೋಕೆ ಹಿಂದೇಟು ಹಾಕಿದ್ರು! ಅಲ್ಲಿಗೆ ಈ ಮಾಫಿಯಾದ ಪವರ್ ಎಂತದ್ದು ಅನ್ನೋದು ನಿಮಗರ್ಥವಾಗುತ್ತೆ.

ಪರೀಕ್ಷೆ ಮುಗಿದ ಮೇಲೆ ಶಿಕ್ಷಕರು ಚೆಕ್ ಮಾಡಿದ್ರೆ ಶಾಕ್! ಪ್ರಶ್ನೆಪತ್ರಿಕೆಯ 108 ಕೆಮಿಸ್ಟ್ರಿ ಪ್ರಶ್ನೆಗಳಲ್ಲಿ 45 ಮತ್ತು 204 ಬಯಾಲಜಿ ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಈ ಲೀಕ್ ಆಗಿರೋ ಪೇಪರ್‌ನಲ್ಲಿ ಮ್ಯಾಚ್ ಆಗಿದ್ದವು. ಅಂದ್ರೆ, ಯಾರು ಈ ಪೇಪರ್ ಓದಿಕೊಂಡಿದ್ದರೋ ಅವರೆಲ್ಲಾ ಇವತ್ತು ವೈದ್ಯರಾಗೋಕೆ ರೆಡಿಯಾಗಿದ್ದಾರೆ. ಅತ್ತ ಕಡುಬಡತನದಲ್ಲಿ ದೀಪದ ಕೆಳಗೆ ಕೂತು ಓದಿದವನು ಮಾತ್ರ ಇವತ್ತು ಕಣ್ಣೀರು ಹಾಕುತ್ತಿದ್ದಾನೆ.

ಟೆಲಿಗ್ರಾಮ್ ನೆಟ್‌ವರ್ಕ್, ಶಾಡೋ ಸರ್ವರ್, ಪೋರ್ಟಬಲ್ ಸ್ಕ್ಯಾನರ್… ಹೀಗೆ ಹೈಟೆಕ್ ಉಪಕರಣಗಳನ್ನು ಬಳಸಿ ಈ ದೇಶದ ಪರೀಕ್ಷಾ ವ್ಯವಸ್ಥೆಯನ್ನು ಬೆತ್ತಲೆ ಮಾಡಲಾಗಿದೆ. 22 ಲಕ್ಷ ವಿದ್ಯಾರ್ಥಿಗಳ ಕನಸಿನ ಮೇಲೆ ಈ ಶುಭಂ ಅಂಡ್ ಟೀಮ್ ರಾಕ್ಷಸನಂತೆ ಕುಣಿದಿದೆ.

error: Content is protected !!