ಮಂಗಳೂರು: ಸಂಕಷ್ಟದ ಸಮಯದಲ್ಲಿ ದೇಶದ ಸಾಮಾನ್ಯ ಜನರು ತ್ಯಾಗ ಮಾಡಲಿ ಎಂದು ಬೋಧಿಸುವ ಕೇಂದ್ರ ಸರ್ಕಾರಕ್ಕೆ ಜನರ ನೋವು ಅರ್ಥವಾಗುತ್ತಿಲ್ಲ. ಜನರು ತ್ಯಾಗ ಮಾಡುವುದಕ್ಕಿಂತ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ದೇಶದ ಜನರಿಗೆ ಸುಖ ಸಿಗುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ಮತ್ತು ಶೈಕ್ಷಣಿಕ ನೀತಿಗಳ ವಿರುದ್ಧ ಕಿಡಿಕಾರಿದ ಅವರು, “ಮೋದಿ ಅಚ್ಚೆ ದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಚೌಕಿದಾರ್, ವಿಕಸಿತ್ ಭಾರತ್ ಎನ್ನುವ ಆಕರ್ಷಕ ಘೋಷಣೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ನಡೆಸುತ್ತಿದ್ದಾರೆ. ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಗ್ಯಾಸ್‌ಗೆ ಸಬ್ಸಿಡಿ ನೀಡಿ ಜನರನ್ನು ರಕ್ಷಿಸಿದ್ದರು. ಆದರೆ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಿ ಎಂದು ಸರ್ಕಾರ ಹೇಳುತ್ತಿದೆ. ಈಗ ವಾಣಿಜ್ಯ ಗ್ಯಾಸ್ ಬೆಲೆಯನ್ನು ಬಾಟಾ ಶೂ ಬೆಲೆಯಂತೆ ರೂ.999 ನಷ್ಟು ಏರಿಕೆ ಮಾಡಿ ಮಧ್ಯಮ ವರ್ಗದವರ ಬದುಕನ್ನು ಹೈರಾಣಾಗಿಸಿದೆ ಎಂದು ರೈ ಟೀಕಿಸಿದರು.

“ಹೆಣ್ಣುಮಕ್ಕಳಿಗೆ ಬಂಗಾರ ಎಂಬುದು ಕೇವಲ ಕಬ್ಬಿಣದ ತುಂಡಲ್ಲ, ಅದು ಗೌರವದ ಸಂಕೇತ ಮತ್ತು ಕಷ್ಟದ ದಿನಗಳ ರಕ್ಷಾಕವಚ. ಅದರ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಬಂಗಾರ ಬಳಸಬೇಡಿ ಎನ್ನುವುದು ಮಹಿಳೆಯರ ಭಾವನೆಗೆ ನೀಡಿದ ಹೊಡೆತ. ರಾಜಕೀಯ ಪ್ರಚಾರಕ್ಕಾಗಿ ಬಂಗಾರದ ತಾಳಿಯನ್ನೂ ಬಳಸಿಕೊಳ್ಳುತ್ತಿರುವ ಇವರು ಜನರ ಸ್ವಾಭಿಮಾನದ ಜೊತೆ ಆಟವಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾದಾಗ ಅದನ್ನು ದೇಶದ ಸ್ವಾಭಿಮಾನದ ಕುಸಿತ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿತ್ತು. ಆದರೆ ಇಂದು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ, ಷೇರು ಪೇಟೆ ತಲ್ಲಣಗೊಂಡಿದೆ. ಅಮೆರಿಕಾ-ಇಸ್ರೇಲ್ ಸಂಘರ್ಷದ ನೆಪ ಹೇಳಿ ಜಾರಿಕೊಳ್ಳುತ್ತಿರುವ ಸರ್ಕಾರಕ್ಕೆ ಕಂಪನಿಗಳ ಮೇಲೆ ಅನುಕಂಪವಿದೆಯೇ ಹೊರತು ಸಾಮಾನ್ಯ ಜನರ ಮೇಲಲ್ಲ,” ಎಂದು ಅವರು ದೂರಿದರು.

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ
“ನೀಟ್ ಪರೀಕ್ಷೆಯಲ್ಲಿ ಸರಣಿ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದು ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿದೆ. ಈ ಲೋಪದೋಷಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ದೇಶದ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದ್ದರೂ ಕೇಂದ್ರ ಶಿಕ್ಷಣ ಸಚಿವರು ಮಾಧ್ಯಮಗಳನ್ನು ಎದುರಿಸಲು ಹಿಂಜರಿಯುತ್ತಿರುವುದು ಅವರ ಅಸಮರ್ಥತೆಗೆ ಸಾಕ್ಷಿಯಾಗಿದೆ. ಕೇವಲ ಕೆಳಮಟ್ಟದ ಅಧಿಕಾರಿಗಳನ್ನು ಬಲಿಪಶು ಮಾಡುವ ಬದಲು, ಈ ಜಾಲದ ಹಿಂದಿರುವ ದೊಡ್ಡ ಕೈಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕೂಡಲೇ ಈ ಎಲ್ಲಾ ಹಗರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಬಾಧಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಬೇಬಿ ಕುಂದರ್, ಜಯಶೀಲ ಅಡ್ಯಂತಾಯ, ವಿಕಾಸ್ ಶೆಟ್ಟಿ, ಶುಭೋದ್ ಆಳ್ವ, ಶಬೀರ್ ಸಿದ್ದಕಟ್ಟೆ, ಅಪ್ಪಿ, ನಝಿರ್ ಬಜಾಲ್ ಮತ್ತಿತರರಿದ್ದರು.