ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ನಗರಸಭೆ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ನಿದಾ ಖಾನ್‌ಗೆ ಆಶ್ರಯ ನೀಡಿದ ಎಐಎಂಐಎಂ (AIMIM) ಕಾರ್ಪೊರೇಟರ್ ಮತಿನ್ ಪಟೇಲ್ ಎಂಬಾತನಿಗೆ ಸೇರಿದ ಅಕ್ರಮ ಕಚೇರಿ ಮತ್ತು ಕೆಲವು ಮಳಿಗೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದೆ.

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಘಟಕದಲ್ಲಿ ನಡೆದಿದ್ದ ವಿವಾದಾತ್ಮಕ ಕಿರುಕುಳ ಮತ್ತು ಮತಾಂತರ ಯತ್ನ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಎಂಬಾಕೆಗೆ ಮತಿನ್ ಪಟೇಲ್ ರಕ್ಷಣೆ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ನಾಸಿಕ್ ಟಿಸಿಎಸ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಧಾರ್ಮಿಕ ಒತ್ತಡ ಹಾಗೂ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ದೂರಿನನ್ವಯ ತನಿಖೆ ನಡೆಸುತ್ತಿದ್ದ ಪೊಲೀಸರು, ಸಂಭಾಜಿನಗರದಲ್ಲಿ ನಿದಾ ಖಾನ್‌ರನ್ನು ಬಂಧಿಸಿದ್ದರು. ಈ ವೇಳೆ ಪಟೇಲ್ ಅವರು ಆರೋಪಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.

ಇದೇ ಸಂದರ್ಭದಲ್ಲಿ ಮತಿನ್ ಪಟೇಲ್ ಅವರ ಆಸ್ತಿಗಳ ಪರಿಶೀಲನೆ ನಡೆಸಿದ ನಗರಸಭೆ, ಅವುಗಳು ನಿಯಮ ಬಾಹಿರವಾಗಿ ನಿರ್ಮಾಣಗೊಂಡಿರುವುದನ್ನು ಪತ್ತೆಹಚ್ಚಿತ್ತು. ಈ ಕುರಿತು ನೀಡಲಾಗಿದ್ದ ನೋಟಿಸ್‌ಗೆ ಪಟೇಲ್ ಅವರಿಂದ ಸಮರ್ಪಕ ಉತ್ತರ ಬಾರದ ಕಾರಣ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪಟೇಲ್ ಅವರ ಮನೆ, ಕಚೇರಿ ಮತ್ತು ಅಕ್ಕಪಕ್ಕದ ಅಂಗಡಿಗಳ ಅಕ್ರಮ ಭಾಗಗಳನ್ನು ತೆರವುಗೊಳಿಸಲಾಯಿತು.

ನಗರಸಭೆಯ ಈ ಕ್ರಮವನ್ನು ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ಖಂಡಿಸಿದ್ದು, ನ್ಯಾಯಾಲಯದ ಆದೇಶಕ್ಕೂ ಕಾಯದೆ ಅವಸರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಅಕ್ರಮ ಕಟ್ಟಡಗಳ ವಿರುದ್ಧ ಕಾನೂನುಬದ್ಧವಾಗಿಯೇ ಕ್ರಮ ಜರುಗಿಸಲಾಗಿದೆ ಎಂದು ಮೇಯರ್ ಸಮೀರ್ ರಾಜುರ್ಕರ್ ಸ್ಪಷ್ಟಪಡಿಸಿದ್ದಾರೆ. ಸದ್ಯ ಟಿಸಿಎಸ್ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ (SIT) ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
