ಅಕಾಲಿಕ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ವಿದ್ಯುತ್ ಕಂಬ; ಪವಾಡಸದೃಶ್ಯದಂತೆ ಪಾರಾದ ಪೆರ್ಲದ ವೈದ್ಯರು

ಕಾಸರಗೋಡು: ಬಾಡೂರು-ಪೆರ್ಲ ರಸ್ತೆಯ ಮಣಿಯಂಪಾರೆ ಮಸೀದಿ ಬಳಿ ದಿಢೀರನ ಬೀಸಿದ ಬೇಸಿಗೆಯ ಅಕಾಲಿಕ ಗಾಳಿ ಮಳೆಗೆ ಮರದ ಜೊತೆಗೆ ಅದರ ಪಕ್ಕದಲ್ಲಿದ್ದ ವಿದ್ಯುತ್ ಕಂಬವೂ, ಚಲಿಸುತ್ತಿದ್ದ ಕಾರಿನ ಮೇಲೆ ಆಕಸ್ಮಿಕವಾಗಿ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಕಾರನ್ನು ಚಲಾಯಿಸುತ್ತಿದ್ದ ಪೆರ್ಲದ ವೈದ್ಯರೋರ್ವರು ಯಾವುದೇ ಗಂಭೀರ ಗಾಯಗಳಿಲ್ಲದೆ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ (ಮೇ 12) ಸಂಜೆ ನಡೆದಿದೆ.

ಸಂತ್ರಸ್ತ ವೈದ್ಯರು ಸೀತಾಂಗೋಳಿ ಹಾಗೂ ಬಾಡೂರು ಪದವಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತಮ್ಮ ಕ್ಲಿನಿಕ್ ಅನ್ನು ಬೇಗನೇ ಮುಚ್ಚಿ ಮನೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮರ ಮತ್ತು ಕಂಬ ಬಿದ್ದ ರಭಸಕ್ಕೆ ಅವರ ಕಾರು ಸಂಪೂರ್ಣ ಜಜ್ಜಿಹೋಗಿದ್ದರೂ, ವೈದ್ಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವುದು ಪವಾಡದಂತಾಗಿದೆ.

ಘಟನಾ ಸ್ಥಳದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯುದ್ದಕ್ಕೂ ಹರಡಿಕೊಂಡಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ಸಕಾಲಿಕ ಕಾರ್ಯಚರಣೆ ನಡೆಸಿ ಮರವನ್ನು ತೆರವುಗೊಳಿಸಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

error: Content is protected !!