ಮಂಗಳೂರು: ನಗರದ ಪುರಭವನದಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ 20ನೇ ವರ್ಷದ (ವಿಂಶತಿ) ಮಹೋತ್ಸವ ಹಾಗೂ ಚೈತನ್ಯ ಸಹಕಾರಿ ಸಂಘದ 10ನೇ ವರ್ಷದ (ದಶಮಾನೋತ್ಸವ) ಸಂಭ್ರಮದ ಸಮಾರೋಪ ಸಮಾರಂಭವು ಭಾನುವಾರ ಅತ್ಯಂತ ವೈಭವದಿಂದ ಜರುಗಿತು. ಜಿಲ್ಲಾಧ್ಯಕ್ಷರಾದ ಸಂಜೀವ ಕೋಟ್ಯಾನ್ ಅವರ ಸಭಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವು ಸಮುದಾಯದ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಘಟನೆಯ ಶಕ್ತಿಯನ್ನು ಪ್ರತಿಬಿಂಬಿಸಿತು.

ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ವೈದ್ಯಕೀಯ ಅಧೀಕ್ಷಕ ಡಾ| ದುರ್ಗಾ ಪ್ರಸಾದ್ ಎಂ.ಆರ್., ಮೂತ್ರ ರೋಗ ತಜ್ಞ ಡಾ| ಸದಾನಂದ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಮಾಜದ ಅಭಿವೃದ್ಧಿಗಾಗಿ ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಅತಿಥಿಗಳು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರನಾಗಿ ಆಯ್ಕೆಯಾದ ಬಂಟ್ವಾಳದ ಹೇಮಂತ್ ಕೆ.ಎ. ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಇಪ್ಪತ್ತು ವರ್ಷಗಳ ಸಾಧನೆ ಹಾಗೂ ಭವಿಷ್ಯದ ಯೋಜನೆಗಳನ್ನು ಒಳಗೊಂಡ ‘ಸ್ಮರಣ ಸಂಚಿಕೆ’ಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕರಾದ ಶ್ರೀ ಶ್ರೀಹರಿ ನಾರಾಯಣ ದಾಸ್ ಅಸ್ರಣ್ಣ ಅವರು ಅದೃಷ್ಟ ಕೂಪನ್ ಬಿಡುಗಡೆ ಮಾಡಿ ಸಮಾಜಕ್ಕೆ ಆಶೀರ್ವಚನ ನೀಡಿದರು. ಬೆಳಗ್ಗೆ ಸಮುದಾಯದ ಪ್ರಮುಖರ ಸಮ್ಮುಖದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹವ್ಯಾಸಿ ಕಲಾವಿದರಿಂದ ನಡೆದ ವಿವಿಧ ನೃತ್ಯ ಮತ್ತು ಗಾಯನ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆಗೊಂಡವು.

ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಅತ್ತಾವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ತೃಪ್ತಿ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸವಿತಾ ಕೆ.ಪಿ. ಅವರ ವಂದನಾರ್ಪಣೆಯೊಂದಿಗೆ ಸಮಾರಂಭವು ಸಮಾಪ್ತಿಗೊಂಡಿತು.