ಟೆನೆರಿಫ್ (ಸ್ಪೇನ್): ಆಕಾಶದಂತೆ ನೀಲಿಯಾಗಿದ್ದ ಸಮುದ್ರ ಈಗ ರಕ್ತದ ಬಣ್ಣಕ್ಕೆ ತಿರುಗಿದೆಯೇನೋ ಎಂಬ ಆತಂಕ ಶುರುವಾಗಿದೆ. 140ಕ್ಕೂ ಹೆಚ್ಚು ಅಮಾಯಕ ಜೀವಗಳನ್ನು ಹೊತ್ತು ಹೊರಟಿದ್ದ ʻMV Hondius’ ಎಂಬ ಐಷಾರಾಮಿ ಕ್ರೂಸ್ ಹಡಗು ಈಗ ಮಸಣದ ಹಡಗಾಗಿ ಮಾರ್ಪಟ್ಟಿದೆ. ಹಡಗಿನ ಮೂಲೆ ಮೂಲೆಯಲ್ಲಿ ಅಡಗಿ ಕುಳಿತಿದ್ದ ʻಹಂಟಾವೈರಸ್’ ಎಂಬ ಕಣ್ಣಿಗೆ ಕಾಣದ ರಾಕ್ಷಸ ಈಗಾಗಲೇ ಮೂವರು ಪ್ರಯಾಣಿಕರನ್ನು ಬಲಿಪಡೆದಿದ್ದು, ಜಗತ್ತಿನಾದ್ಯಂತ ಹೊಸ ಸಾಂಕ್ರಾಮಿಕದ ಭೀತಿ ಹುಟ್ಟಿಸಿದೆ.

ಸಮುದ್ರದ ನಡುವೆ ಹಾಯಾಗಿ ಪ್ರವಾಸ ಮಾಡುತ್ತಿದ್ದವರ ಎದೆಯಲ್ಲಿ ನಡುಕ ಹುಟ್ಟಿಸಿರುವುದು ಈ ‘ಅಂಡಿಸ್’ ತಳಿಯ ಹಂಟಾವೈರಸ್. ಇದು ಕೇವಲ ಇಲಿಗಳಿಂದ ಮಾತ್ರವಲ್ಲ, ಮನುಷ್ಯನಿಂದ ಮನುಷ್ಯನಿಗೂ ಹರಡಬಲ್ಲ ಜಗತ್ತಿನ ಅತ್ಯಂತ ಅಪಾಯಕಾರಿ ವೈರಸ್‌ಗಳಲ್ಲಿ ಒಂದು. ಸೋಂಕಿತರು ಉಸಿರಾಡಲು ಪರದಾಡುತ್ತಾ, ಕಣ್ಣೆದುರೇ ಪ್ರಾಣ ಬಿಡುತ್ತಿದ್ದರೆ, ಉಳಿದ ಪ್ರಯಾಣಿಕರು ‘ಮುಂದಿನ ಸರದಿ ಯಾರದ್ದು?’ ಎಂಬ ಭಯದಲ್ಲಿ ಹಡಗಿನ ಕೋಣೆಗಳಲ್ಲಿ ಬಂಧಿಯಾಗಿದ್ದಾರೆ.

ಈ ವೈರಸ್‌ನ ಅತ್ಯಂತ ಭಯಾನಕ ವಿಷಯವೆಂದರೆ, ಇದಕ್ಕೆ ಜಗತ್ತಿನಲ್ಲಿ ಇಂದಿಗೂ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ! ಒಮ್ಮೆ ಸೋಂಕು ತಗುಲಿದರೆ ಅದು ನೇರವಾಗಿ ಶ್ವಾಸಕೋಶ ಮತ್ತು ಹೃದಯದ ಮೇಲೆ ದಾಳಿ ಮಾಡುತ್ತದೆ. ಆರಂಭದಲ್ಲಿ ಕೇವಲ ಜ್ವರ ಮತ್ತು ಮೈಕೈ ನೋವಿನಂತೆ ಕಂಡುಬರುವ ಈ ಕಾಯಿಲೆ, ಕೆಲವೇ ಗಂಟೆಗಳಲ್ಲಿ ಮನುಷ್ಯನನ್ನು ಸಾವಿನ ದವಡೆಗೆ ದೂಡುತ್ತದೆ. ಪ್ರಸ್ತುತ ಹಡಗಿನಿಂದ ಇಳಿದವರನ್ನು ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದ್ದು, ಇಡೀ ಜಗತ್ತು ಉಸಿರು ಬಿಗಿಹಿಡಿದು ಕಾಯುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಸ್ವತಃ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಅರ್ಥವಾಗುತ್ತದೆ. “ಇದು ಮತ್ತೊಂದು ಕೋವಿಡ್ ಅಲ್ಲ” ಎಂದು ಅವರು ಹೇಳುತ್ತಿದ್ದರೂ, ಹಡಗಿನಲ್ಲಿದ್ದ ಜನರ ಕಿರುಚಾಟ ಮತ್ತು ಸಾವಿನ ಸರಣಿ ಇಡೀ ಮಾನವಕುಲಕ್ಕೆ ಹೊಸ ಎಚ್ಚರಿಕೆಯ ಗಂಟೆ ಬಾರಿಸಿದೆ. ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ಸದ್ಯಕ್ಕೆ ಬಚಾವಾಗಿದ್ದರೂ, ವೈರಸ್‌ನ ಸುಪ್ತಾವಸ್ಥೆಯ ಅವಧಿ (Incubation period) ಮುಗಿಯುವವರೆಗೂ ಯಾರು ಸುರಕ್ಷಿತ ಎಂಬುದು ಯಾರಿಗೂ ತಿಳಿಯದಂತಾಗಿದೆ.
