
ಸುರತ್ಕಲ್: ಇತಿಹಾಸ ಪ್ರಸಿದ್ದ ಚೇಳೈರು ಖಂಡಿಗೆ ನಂದಿನಿ ನದಿಗೆ ಮುಂಚೂರು ವೆಟ್ ವೆಲ್ ನ ಹತ್ತಿರದ ಒಳಚರಂಡಿಯ ಕೊಳಚೆ ನೀರು ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಖಾಸಗಿ ಅಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೇಲ್ ಗಳ ತ್ಯಾಜ್ಯ ನೀರುಗಳನ್ನು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದೆ.

ಇದರಿಂದಾಗಿ ಚೇಳೈರು ಖಂಡಿಗೆ ಭಾಗದ ಅನೇಕ ಕೃಷಿಯನ್ನೇ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು, ಬಾವಿಗಳು ಮಲೀನಗೊಂಡಿದೆ. ಕೊಳಕು ನೀರಿನ ವಾಸನೆಯಿಂದ ಉಸಿರಾಟದ ತೊಂದರೆ ಮಾತ್ರವಲ್ಲದೆ ಇತಿಹಾಸ ಪ್ರಸಿದ್ದ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ. ಜಾನುವಾರುಗಳಿಗೆ ನೀರು ಕುಡಿಯಲು ಮತ್ತು ಮೇವು ತಿನ್ನದ ಹೀನಾಯ ಪರಿಸ್ಥಿತಿ ಎದುರಾಗಿದ್ದು ಬಾವಿಯ ನೀರು ಕುಡಿದ ಅನೇಕ ಜನರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿದ್ದು ಖೇದಕರ ವಿಷಯವಾಗಿದೆ. ಹಿಂದೆ ಈ ಬಗ್ಗೆ ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳೈರು ಸೇರಿ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯ ವಿರುದ್ಧ ಬೃಹತ್ ಇತ್ತಿಚೆಗೆ ಪ್ರತಿಭಟನೆ ನಡೆಸಲಾಗಿತ್ತು.

ಈ ವಿಷಯದ ಬಗ್ಗೆ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ನಂದಿನಿ ನದಿ ಸಮಸ್ಯೆ ಬಗ್ಗೆ ಬೆಂಗಳೂರು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ಅನುದಾನ ನೀಡಿ ಬಗೆಹರಿಸಬೇಕಾಗಿ ಆಗ್ರಹಿಸಿದ್ದರು. ಅಷ್ಟೇ ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ನಂದಿನಿ ನದಿ ಕಲುಷಿತಗೊಂಡಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಹಾಗೂ ಕರ್ನಾಟಕ ರಾಜ್ಯದ ಉಪ ಲೋಕಾಯುಕ್ತರು ಇತ್ತೀಚೆಗೆ ಖಂಡಿಗೆ ನಂದಿನಿ ನದಿಗೆ ಮತ್ತು ಖಾಸಗಿ ಅಸ್ಪತ್ರೆಗೆ ಭೇಟಿ ನೀಡಿ ನದಿಯನ್ನು ಸ್ವಚ್ಚಗೊಳಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದರು.

ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಬಗ್ಗೆ ಅಧಿಕಾರಿಗಳ ಸಭೆಯನ್ನು ನಡೆಸಿ, ಸಮಸ್ಯೆ ಪರಿಹರಿಸಲು ಸುಮಾರು 40 ಕೋಟಿ ವೆಚ್ಚ ತಗಲಿದ್ದು ಸರಕಾರಕ್ಕೆ ಪ್ರಸ್ತಾಪನೆ ಕಳುಹಿಸುವುದಾಗಿ ತಿಳಿಸಿದರು. ತಾತ್ಕಾಲಿಕವಾಗಿ ಮಂಗಳೂರು ನಗರ ಪಾಲಿಕೆ ನಂದಿನಿ ನದಿಯನ್ನು ಸಂಪೂರ್ಣ ಸ್ವಚ್ಚಗೊಳಿಸಲು ಮಿಷನ್ ಕಳುಹಿಸಿ ಕ್ರಮ ಕೈಗೊಂಡಿದ್ದರು. ಆದರೆ ಈಗ ಪುನ: ನದಿಯಲ್ಲಿ ಕೊಳೆತ ದುರ್ನಾತ ಗಬ್ಬು ವಾಸನೆ ಮತ್ತು ಹಾವಾಸೆ ತುಂಬಿಕೊಂಡಿದ್ದು ಈ ಬಗ್ಗೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದಾಗ ಅವರು ಮಂಗಳೂರು ಸಹಾಯಕ ಆಯುಕ್ತರಾದ ಮೀನಾಕ್ಷಿ ಆರ್ಯ ಅವರನ್ನು ಭೇಟಿ ನೀಡಿ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸೂಚಿಸಿದ್ದು ಅವರ ಸೂಚನೆ ಮೇರೆಗೆ ಆಯುಕ್ತರು ಇಂದು ಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಂದಿನಿ ನದಿ ಸಂರಕ್ಷಣಾ ಸಮಿತಿಯವರು ಇಷ್ಟರವರೆಗೆ ಸ್ಥಳಕ್ಕೆ ಉಪಲೋಕಾಯುಕ್ತರು, ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ, ಸಂಬಂಧಿಸಿದ ಉನ್ನತ ಮಟ್ಟದ ಅನೇಕ ಅಧಿಕಾರಿಗಳು ಬಂದರೂ ಸಮಸ್ಯೆ ಬಗೆಹರಿಸಿಲ್ಲ. ಇನ್ನೂ ಸ್ವಲ್ಪ ಸಮಯ ಕಾದು ಕೊಳಕು ನೀರನ್ನು ನದಿಗೆ ಬಿಡುವುದನ್ನು ನಗರ ಪಾಲಿಕೆ ಮತ್ತು ಖಾಸಗಿ ಅಸ್ಪತ್ರೆಯವರು ನಿಲ್ಲಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಮೂಲಕ ಪ್ಲಾಂಟನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದಕ್ಕೆ ಉತ್ತರಿಸಿದ ಸಹಾಯಕ ಆಯುಕ್ತರು ಈ ಬಗ್ಗೆ ತಕ್ಷಣ ನಗರಪಾಲಿಕೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಮಂಗಳೂರು ತಹಶಿಲ್ದಾರರಾದ ರಮೇಶ್ ಬಾಬು, ಕಂದಾಯ ಅಧಿಕಾರಿ ಪ್ರಸಾದ್, ಚೇಳೈರು ಗ್ರಾಮ ಅಡಳಿತ ಅಧಿಕಾರಿ ಸುಲೋಚನಾ, ನಗರಪಾಲಿಕೆ ಅಧಿಕಾರಿಗಳಾದ ಲಾವಣ್ಯ, ಶಿವಲಿಂಗಪ್ಪ, ಯತೀಶ್, ಪರಿಸರ ಇಲಾಖೆಯ ಅಧಿಕಾರಿಗಳು, ಚೇಳೈರು ಗ್ರಾಮ ಪಂಚಾಯತ್ ನಿಕಟಪೂರ್ವಧ್ಯಕ್ಷ ಜಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಡಿ, ಮಾಜಿ ಸದಸ್ಯರಾದ ಸುಧಾಕರ ಶೆಟ್ಟಿ, ನಂದಿನಿ ನದಿ ಸಂರಕ್ಷಣಾ ಸಮಿತಿಯ ಪ್ರಮುಖರಾದ ಸುಕೇಶ್ ಶೆಟ್ಟಿ ಖಂಡಿಗೆ, ನಿತಿನ್ ಶೆಟ್ಟಿ ಖಂಡಿಗೆ, ವಾಸುದೇವಾ ಶೆಟ್ಟಿ ಖಂಡಿಗೆ, ಚರಣ್ ಕುಮಾರ್, ಸುನೀಲ್ ಶೆಟ್ಟಿ ಚೇಳೈರು ಮುಂತಾದವರು ಉಪಸ್ಥಿತರಿದ್ದರು.