
ಮಂಗಳೂರು: ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರೂ ಕೋಟ್ಯಾಂತರ ಭಕ್ತರ ಆರಾಧ್ಯಮಾತೆಯೂ ಆಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿಗೆ ಆಗಮಿಸುವ ಪ್ರಯುಕ್ತ ನಡೆಯಲಿರುವ ಬ್ರಹ್ಮಸ್ಥಾನಂ ಮಹೋತ್ಸವ- ಅಮೃತಸಂಗಮ 2026 ಕಾರ್ಯಕ್ರಮದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು.

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿನ ಈ ಹಿಂದಿನ ಕಾರ್ಯಕ್ರಮದಲ್ಲಿ ದಾಖಲೆಯ ಸಂಖ್ಯೆಯಲ್ಲಿ , ಅತ್ಯಧಿಕ ಗಂಟೆಗಳ ಕಾಲ ಬಳಿಬಂದ ಪ್ರತಿಯೊಬ್ಬರನ್ನು ಅಪ್ಪಿ ಆಲಂಗಿಸಿ ಅನುಗ್ರಹಿಸಿರುತ್ತಾರೆ. ಈ ಬಾರಿಯ ಕಾರ್ಯಕ್ರಮವು ಏಳು ವರ್ಷಗಳ ಬಳಿಕ ನಡೆಯುತ್ತಿರುವುದಲ್ಲದೆ ಕರ್ನಾಟಕದಲ್ಲಿ ಏಕೈಕ ಕಾರ್ಯಕ್ರಮ ಇದಾಗಿರುವುದರಿಂದ ಬಹಳ ಮಹತ್ವ ಪಡೆದಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿವೆ.

ನನ್ನ ಕ್ಷೇತ್ರದಲ್ಲಿರುವ ಈ ಪವಿತ್ರ ಸನ್ನಿಧಿಗೆ ಬರುವ ಜನರಿಗೆ, ಸೇವಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ 10 ಶೌಚಾಲಯಗಳನ್ನು ನಿರ್ಮಿಸಲಾಗಿದೆ.ಈ ಪವಿತ್ರ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಅಮ್ಮನವರ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಂದು ಭಾಗವಹಿಸಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗುವಂತೆ ಕರೆಯಿತ್ತರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜ ಮಾತನಾಡಿ
ಅಮ್ಮನವರ ಪಾದಸ್ಪರ್ಶದಿಂದ ಈ ಭಾಗದಲ್ಲಿ ಸಕಾರಾತ್ಮಕ ಪರಿವರ್ತನೆಯಾಗಿದ್ದು, ಅಮ್ಮನವರ ಮಾನವೀಯ ಸೇವಾಯೋಜನೆಗಳು ಜನತೆಗೆ ಪ್ರಯೋಜನಕಾರಿಯಾಗಿದೆ.ಇಲ್ಲಿ ನಡೆದ ಉಚಿತ ಹೃದಯ ಶಸ್ತ್ರ ಚಿಕಿತ್ಸಾ ಶಿಬಿರವು ಅಸಹಾಯಕ ಪೋಷಕರಿಗೆ ವರದಾನವೆನಿಸಿದೆ .ಆರೋಗ್ಯ ಸೇವೆಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೃಪ್ತಿ ತಂದಿದೆ. ಮೇ 28 ಮತ್ತು 29 ರಂದು ಅಮೃತ ವಿದ್ಯಾಲಯಂ ಮೈದಾನದಲ್ಲಿ ನಡೆಯುವ ಅಮ್ಮನವರ ಕಾರ್ಯಕ್ರಮಕ್ಕೆ ನಾನು ಮತ್ತು ವಿಧಾನಸಭಾ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ನಮ್ಮ ರಾಜಕೀಯ ಮರೆತು ಜೊತೆಯಾಗಿ ಸರ್ವರೀತಿಯ ಸಹಕಾರ ನೀಡುತ್ತೇವೆ ಎಂದು ಭರವಸೆಯಿತ್ತರು.

ವೇದಿಕೆಯಲ್ಲಿ ಗೌರವಾಧ್ಯಕ್ಷರುಗಳಾದ ಡಾ.ಜೀವರಾಜ್ ಸೊರಕೆ,ಡಾ. ವೈ. ಸನತ್ ಹೆಗ್ಡೆ, ಡಾ.ವಸಂತ ಕುಮಾರ್ ಪೆರ್ಲ,ಅಧ್ಯಕ್ಷರಾದ ಸುರೇಶ್ ಅಮೀನ್,ಚೇತನ್ ಬೆಂಗ್ರೆ,ಮುರಳೀಧರ ಶೆಟ್ಟಿ,ಗಣೇಶ್ ಹೊಸಬೆಟ್ಟು ವಿ. ಎಲ್.ರೇಗೋ ಉಪಸ್ಥಿತರಿದ್ದರು.ಡಾ. ದೇವದಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಿಲ್ಲೆಯ ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಮ್ಮನ ಭಕ್ತರು ಭಾಗವಹಿಸಿದ್ದರು.
