ಮಂಗಳೂರು: ನಗರದ ಕೊಟ್ಟಾರ ಬಳಿಯ ಪೃಥ್ವಿ ಲಾಡ್ಜ್ ಮುಂಭಾಗದಲ್ಲಿ ಕಳೆದ ಎರಡು ದಿನಗಳಿಂದ ಒಳಚರಂಡಿ (ಡ್ರೈನೇಜ್) ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಾರ್ವಜನಿಕರು ಹಾಗೂ ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನ ಹೃದಯಭಾಗದಲ್ಲೇ ಇಂತಹ ಅಧ್ವಾನ ಮುಂದುವರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.







ಕಳೆದ ಎರಡು ದಿನಗಳಿಂದ ಡ್ರೈನೇಜ್ ಪೈಪ್‌ಲೈನ್ ಹೊಡೆದು ಹೋಗಿದ್ದು, ಅಸಹ್ಯಕರವಾದ ಮಲೀನ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ಪಕ್ಕದ ಅಂಗಡಿ ಮುಂಗಟ್ಟುಗಳ ಮಾಲೀಕರು ಮತ್ತು ಹೋಟೆಲ್‌ಗೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ರಸ್ತೆಯ ತುಂಬಾ ಕೊಳಚೆ ನೀರು ನಿಂತಿರುವುದರಿಂದ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ನಿಂತಿರುವ ಡ್ರೈನೇಜ್ ನೀರನ್ನು ವಾಹನಗಳು ವೇಗವಾಗಿ ಹಾದುಹೋಗುವಾಗ, ಆ ಕೊಳಚೆ ನೀರು ರಸ್ತೆಯ ಬದಿಯಲ್ಲಿ ಹೋಗುವ ಪಾದಚಾರಿಗಳ ಮೇಲೆ ಹಾರುತ್ತಿದೆ. ಇದರಿಂದಾಗಿ ಶಾಲೆಗೆ ಹೋಗುವ ಮಕ್ಕಳು ಮತ್ತು ಕೆಲಸಕ್ಕೆ ತೆರಳುವ ಸಾರ್ವಜನಿಕರು ‘ಡ್ರೈನೇಜ್ ನೀರಿನ ಅಭಿಷೇಕ’ ಮಾಡಿಸಿಕೊಂಡೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದ್ದರೂ, ಸಾಮಾನ್ಯ ನಾಗರಿಕರಿಗೆ ಕನಿಷ್ಠ ಸುಗಮವಾಗಿ ನಡೆಯಲು ದಾರಿ ಇಲ್ಲದಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ:
“ಕಳೆದೆರಡು ದಿನಗಳಿಂದ ಈ ಸಮಸ್ಯೆ ಇದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ರೋಗರುಜಿನಗಳು ಹರಡುವ ಭಯವಿದ್ದರೂ ಪಾಲಿಕೆಯ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?” ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದ್ದಾರೆ. ಕೂಡಲೇ ನಗರ ಪಾಲಿಕೆ ಅಥವಾ ಸಂಬಂಧಪಟ್ಟ ಇಲಾಖೆಯು ಈ ಡ್ರೈನೇಜ್ ಸೋರಿಕೆಯನ್ನು ತಡೆಗಟ್ಟಿ, ಪಾದಚಾರಿಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
