
ಸುರತ್ಕಲ್: ದೀಪಾವಳಿ ಎಂದರೆ ಕೇವಲ ಪಟಾಕಿ, ದೀಪಗಳ ಹಬ್ಬವಲ್ಲ. ಅದು ಮನುಷ್ಯತ್ವವನ್ನು ಬೆಳಗಿಸುವ ಹಬ್ಬ ಎಂಬುದನ್ನು ಕಾವೂರಿನಲ್ಲಿ ಇನಾಯತ್ ಅಭಿಮಾನಿ ಬಳಗ ಮತ್ತೊಮ್ಮೆ ಸಾಬೀತುಪಡಿಸಿತು.

ಇನಾಯತ್ ಅಭಿಮಾನಿ ಬಳಗದಿಂದ ಕಾವೂರಿನಲ್ಲಿ ಅರ್ಥಪೂರ್ಣ ದೀಪಾವಳಿ ಆಚರಣೆ ಅದ್ದೂರಿಯಾಗಿ ನಡೆಯಿತು. ಈ ಬಾರಿಯ ದೀಪಾವಳಿಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಾಧಕರನ್ನು ಗುರುತಿಸುವ, ಗೌರವಿಸುವ ವೇದಿಕೆಯನ್ನಾಗಿ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಶಾಲು, ಪೇಟ, ಸ್ಮರಣಿಕೆ ಜತೆಗೆ ಬೆಳ್ಳಿ ನಾಣ್ಯ ನೀಡಿ ಸಮ್ಮಾನಿಸಲಾಯಿತು. ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುವವರನ್ನು ಹೀಗೆ ಗುರುತಿಸಿ ಗೌರವಿಸುವುದು ನಿಜವಾದ ದೀಪಾವಳಿ ಎಂದು ಸೇರಿದ್ದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದರೊಂದಿಗೆ ಗೋ ಪೂಜೆಯೊಂದಿಗೆ ಧಾರ್ಮಿಕವಾಗಿಯೂ ದೀಪಾವಳಿ ಆಚರಣೆ ನಡೆಯಿತು. ಆಕರ್ಷಕ ಗೂಡು ದೀಪಗಳ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಗೂಡು ದೀಪಗಳನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಪೂಜಾರಿ ಅವರು, ಇನಾಯತ್ ಅಲಿ ಅವರ ಪರಿಕಲ್ಪನೆಯಲ್ಲಿ ನಡೆಯುವ ಸೌಹಾರ್ದಯುತ ದೀಪಾವಳಿಯನ್ನು ಶ್ಲಾಘಿಸಿದರು. ಸರ್ವ ಧರ್ಮೀಯರಿಗೆ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿರುವುದು ನಿಜವಾದ ಸೌಹಾರ್ದತೆ. ಇನಾಯತ್ ಅಲಿ ಅವರು ಪ್ರತಿ ವರ್ಷ ದೀಪಾವಳಿ ಆಚರಿಸುತ್ತಿದ್ದು, ಎಲ್ಲಾ ಧರ್ಮದವರು ಇದರಲ್ಲಿ ಭಾಗವಹಿಸುತ್ತ ಬರುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಇನಾಯತ್ ಅಲಿ ಅವರು ಪ್ರತಿವರ್ಷವೂ ಹೀಗೆ ಎಲ್ಲರನ್ನೂ ಒಟ್ಟುಗೂಡಿಸಿ ಹಬ್ಬ ಆಚರಿಸುತ್ತಿರುವುದು ಕಾವೂರಿನಲ್ಲಿ ಸೌಹಾರ್ದತೆಯ ಸಂಕೇತವಾಗಿದೆ.

ಕಾರ್ಯಕ್ರಮದಲ್ಲಿ ಮಮತಾ ಗಟ್ಟಿ, ಪುರುಷೋತ್ತಮ್ ಚಿತ್ರಾಪುರ, ಪದ್ಮನಾಭ ಸಾಲ್ಯಾನ್, ರೂಪೇಶ್ ಶೆಟ್ಟಿ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಾತಿ, ಧರ್ಮ ಮೀರಿ ಎಲ್ಲರೂ ಒಂದಾಗಿ ಹಬ್ಬ ಆಚರಿಸಿದ ಈ ದೀಪಾವಳಿ ಕಾವೂರಿನ ಜನರ ಮನದಲ್ಲಿ ಸ್ಮರಣೀಯವಾಗಿ ಉಳಿಯಿತು.