ಖಾಕಿ ಆದೇಶಕ್ಕೂ ಕ್ಯಾರೇ ಎನ್ನದ ʻರಾಯಲ್ ಗಝಿಬೋ’ ದರ್ಪ: ಸಾರ್ವಜನಿಕ ರಸ್ತೆಯಲ್ಲಿ ಮತ್ತೆ ಬ್ಯಾರಿಕೇಡ್ ಅಧಿಪತ್ಯ!

ಮಂಗಳೂರು: ಮಂಗಳೂರು ನಗರದ ಶರವು ಮಹಾಗಣಪತಿ ದೇವಸ್ಥಾನದ ರಸ್ತೆ ಬದಿಯ ‘ರಾಯಲ್ ಗಝಿಬೋ’ ರೆಸ್ಟೋರೆಂಟ್ ಮಾಲೀಕನು ಸಾರ್ವಜನಿಕ ರಸ್ತೆಯನ್ನು ತನ್ನ ಸ್ವಂತ ಆಸ್ತಿಯೆಂದು ಭಾವಿಸಿದ್ದು, ಕಾನೂನು ಮತ್ತು ಪೊಲೀಸರ ಆದೇಶವನ್ನೇ ಕಿಂಚಿತ್ತೂ ಲೆಕ್ಕಿಸದೆ ಉದ್ಧಟತನದ ಪರಮಾವಧಿ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆ ತಾನೇ ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಪೊಲೀಸರು ಬೆನ್ನು ತಿರುಗಿಸುತ್ತಿದ್ದಂತೆ ಇಂದು ಮತ್ತೆ ಅದೇ ಜಾಗದಲ್ಲಿ ಬ್ಯಾರಿಕೇಡ್‌ಗಳನ್ನು ಪ್ರತ್ಯಕ್ಷಗೊಳಿಸಿರುವ ರೆಸ್ಟೋರೆಂಟ್ ಮಾಲೀಕ, ತಾನು ಕಾನೂನಿಗಿಂತ ಮಿಗಿಲು ಎಂಬಂತೆ ವರ್ತಿಸುತ್ತಿರುವುದು ನಾಗರಿಕರನ್ನು ಕೆರಳಿಸಿದೆ.

ಸಾರ್ವಜನಿಕ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಲು ಬರುವ ಸಾರ್ವಜನಿಕರನ್ನು ಅಡ್ಡಗಟ್ಟುವ ರೆಸ್ಟೋರೆಂಟ್ ಸಿಬ್ಬಂದಿ, “ಇದು ನಮ್ಮ ಜಾಗ” ಎಂದು ಅವಾಜ್ ಹಾಕುತ್ತಿದ್ದಾರೆ. ನಗರದ ರಸ್ತೆಗಳು ಮಂಗಳೂರು ಮಹಾನಗರ ಪಾಲಿಕೆಗೆ (MCC) ಸೇರಿವೆಯೇ ಹೊರತು ರಾಯಲ್ ಗಝಿಬೋ ಹೋಟೆಲ್‌ಗಲ್ಲ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯನ್ನು ಕಾಲಡಿ ಇಟ್ಟು ತುಳಿಯುತ್ತಿರುವ ಈ ಮಾಲೀಕನಿಗೆ ರಸ್ತೆಯನ್ನು ಖಾಸಗಿ ಪಾರ್ಕಿಂಗ್ ಮಾಡಲು ಪರವಾನಗಿ ನೀಡಿದ ಮಹಾನುಭಾವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.

ಶರವು ದೇವಸ್ಥಾನ ಸಹಿತ ವಿವಿಧ ಕಾರ್ಯಗಳಿಗಾಗಿ ಮಂಗಳೂರಿಗೆ ಬರುವ ಸಾವಿರಾರು ಸಾರ್ವಜನಿಕರು ಪಾರ್ಕಿಂಗ್ ಸಿಗದೆ ಒದ್ದಾಡುತ್ತಿದ್ದರೆ, ಈ ಹೋಟೆಲ್ ಮಾಲೀಕ ಮಾತ್ರ ತನ್ನ ಗಿರಾಕಿಗಳಿಗಾಗಿ ರಸ್ತೆಯನ್ನೇ ಬುಕ್ ಮಾಡಿಕೊಂಡಿದ್ದಾನೆ. ಹೋಟೆಲ್‌ಗೆ ಬರುವವರು ಮಾತ್ರ ವಿಐಪಿಗಳೇ? ದಾರಿಯಲ್ಲಿ ಹೋಗುವ ಸಾಮಾನ್ಯ ಜನರಿಗೆ ಈ ರಸ್ತೆಯಲ್ಲಿ ಹಕ್ಕಿಲ್ಲವೇ? ಜನಸಾಮಾನ್ಯರ ತೆರಿಗೆ ಹಣದಲ್ಲಿ ನಿರ್ಮಾಣವಾದ ರಸ್ತೆಯನ್ನು ಖಾಸಗಿ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಬಂದು ತೆಗೆಸಿದ ಬ್ಯಾರಿಕೇಡ್ ಅನ್ನು ಮತ್ತೆ ಅಳವಡಿಸುವುದು ಎಂದರೆ ಅದು ನೇರವಾಗಿ ಪೊಲೀಸ್ ಇಲಾಖೆಗೆ ಹಾಕಿದ ಸವಾಲಾಗಿದೆ. ಸಂಚಾರ ಪೊಲೀಸರು ಸಣ್ಣಪುಟ್ಟ ವಾಹನ ಸವಾರರ ಮೇಲೆ ತೋರುವ ಪ್ರತಾಪವನ್ನು ಈ ಉದ್ಧಟ ಹೋಟೆಲ್ ಮಾಲೀಕನ ಮೇಲೆ ಏಕೆ ತೋರುತ್ತಿಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇನ್ನು ಮುಂದೆಯೂ ಈ ಅಕ್ರಮ ಬ್ಯಾರಿಕೇಡ್ ರಾಜ್ಯಭಾರ ಮುಂದುವರಿದಿದ್ದೇ ಆದಲ್ಲಿ, ಸಾರ್ವಜನಿಕರೇ ಬೀದಿಗಿಳಿದು ಅಕ್ರಮವನ್ನು ತೆರವುಗೊಳಿಸಬೇಕಾಗುತ್ತದೆ. ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಹೋಟೆಲ್ ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!