ವಾಷಿಂಗ್ಟನ್: ಪೂರ್ವ ಪೆಸಿಫಿಕ್ ಸಾಗರದಲ್ಲಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಶಂಕಿತ ದೋಣಿಯ ಮೇಲೆ ಅಮೆರಿಕದ ಮಿಲಿಟರಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ಅಮೆರಿಕವು ಮಾದಕ ದ್ರವ್ಯ ಜಾಲದ ವಿರುದ್ಧ ತನ್ನ ಆಕ್ರಮಣಕಾರಿ ಧೋರಣೆಯನ್ನು ಮುಂದುವರಿಸಿದೆ.

ಅಮೆರಿಕದ ಸದರ್ನ್ ಕಮಾಂಡ್ (SOUTHCOM) ನೀಡಿರುವ ಮಾಹಿತಿಯ ಪ್ರಕಾರ, ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಶಯಾಸ್ಪದವಾಗಿ ಚಲಿಸುತ್ತಿದ್ದ ದೋಣಿಯೊಂದನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ದೋಣಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಬದುಕುಳಿದಿದ್ದಾನೆ. ಬದುಕುಳಿದವನಿಗಾಗಿ ಅಮೆರಿಕದ ಕೋಸ್ಟ್ ಗಾರ್ಡ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ಈ ದೋಣಿಯನ್ನು “ನಿಯೋಜಿತ ಭಯೋತ್ಪಾದಕ ಸಂಘಟನೆಗಳು” ನಡೆಸುತ್ತಿದ್ದವು ಮತ್ತು ಅದು ಪರಿಚಿತ ಮಾದಕ ದ್ರವ್ಯ ಸಾಗಾಟದ ಮಾರ್ಗದಲ್ಲಿ ಚಲಿಸುತ್ತಿತ್ತು ಎಂದು ಮಿಲಿಟರಿ ಹೇಳಿದೆ. ಕಳೆದ ಸೆಪ್ಟೆಂಬರ್‌ನಿಂದ ಡೊನಾಲ್ಡ್ ಟ್ರಂಪ್ ಆಡಳಿತವು ಆರಂಭಿಸಿರುವ ಈ ಕಾರ್ಯಾಚರಣೆಯಲ್ಲಿ ಈವರೆಗೆ ಕನಿಷ್ಠ 192 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಹಿಂದೆ ಮಾದಕ ದ್ರವ್ಯ ಸಾಗಿಸುವ ಹಡಗುಗಳನ್ನು ತಡೆದು ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗಿನ ಕಾರ್ಯಾಚರಣೆಯಲ್ಲಿ ನೇರವಾಗಿ ಕ್ಷಿಪಣಿ ದಾಳಿ ನಡೆಸಿ ದೋಣಿಗಳನ್ನು ನಾಶಪಡಿಸಲಾಗುತ್ತಿದೆ.

ಕಾನೂನು ಮತ್ತು ಮಾನವ ಹಕ್ಕುಗಳ ಆಕ್ಷೇಪ:
ಅಮೆರಿಕದ ಈ ನಡೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ದಾಳಿಗೊಳಗಾದ ದೋಣಿಗಳಲ್ಲಿ ಮಾದಕ ದ್ರವ್ಯ ಇತ್ತು ಎಂಬುದಕ್ಕೆ ಅಮೆರಿಕ ಇದುವರೆಗೆ ಬಲವಾದ ಪುರಾವೆಗಳನ್ನು ನೀಡಿಲ್ಲ ಎಂದು ಟೀಕಾಕಾರರು ವಾದಿಸುತ್ತಿದ್ದಾರೆ. ಅಲ್ಲದೆ, ಯಾವುದೇ ವಿಚಾರಣೆ ಇಲ್ಲದೆ ನಡೆಸುತ್ತಿರುವ ಈ ಹತ್ಯೆಗಳು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
