ಭಾರತದ ರಕ್ಷಣಾ ಸಾರಥ್ಯಕ್ಕೆ ಈಗ ರಾಜಾ ಸುಬ್ರಮಣಿ ಸಾರಥಿ

ನವದೆಹಲಿ: ಭರತಮಾತೆಯ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ಪಡೆಗಳು ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿವೆ. ಗಡಿಭಾಗದ ಕಲ್ಲುಮುಳ್ಳಿನ ಹಾದಿಗಳಲ್ಲಿ, ಹಿಮಚ್ಛಾದಿತ ಪರ್ವತ ಶ್ರೇಣಿಗಳಲ್ಲಿ ದಶಕಗಳ ಕಾಲ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ ವೀರ ಸೇನಾನಿ, ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ದೇಶದ ಮುಂದಿನ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (CDS) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಸಿಡಿಎಸ್ ಅನಿಲ್ ಚೌಹಾಣ್ ಅವರ ಉತ್ತರಾಧಿಕಾರಿಯಾಗಿ ಈ “ಸೈನಿಕ-ಪಂಡಿತ” (Soldier-Scholar) ಯುದ್ಧಭೂಮಿಯ ಸಾರಥ್ಯ ವಹಿಸುತ್ತಿರುವುದು ಭಾರತೀಯ ಸಶಸ್ತ್ರ ಪಡೆಗಳಿಗೆ ಹೊಸ ಚೈತನ್ಯ ನೀಡಿದೆ.

ಗಡಿಯ ಕಾವಲುಗಾರ: ನಾಲ್ಕು ದಶಕಗಳ ಅಪ್ರತಿಮ ಶೌರ್ಯ
1985ರಲ್ಲಿ ಗಢ್ವಾಲ್ ರೈಫಲ್ಸ್ ಮೂಲಕ ಸೇನೆಗೆ ಪಾದಾರ್ಪಣೆ ಮಾಡಿದ ರಾಜಾ ಸುಬ್ರಮಣಿ ಅವರು ಕಳೆದ 40 ವರ್ಷಗಳಿಂದ ದೇಶದ ಭದ್ರತೆಯನ್ನೇ ತಮ್ಮ ಉಸಿರಾಗಿಸಿಕೊಂಡವರು. ಅಸ್ಸಾಂನ ಕಾಡುಗಳಲ್ಲಿ ಉಗ್ರರ ದಮನಕ್ಕೆ ನಡೆಸಿದ ʻಆಪರೇಷನ್ ರೈನೋ’ ಆಗಲಿ, ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಕಾವಲಾಗಲಿ ಅಥವಾ ಚೀನಾ ಗಡಿಯ ಸವಾಲುಗಳಾಗಲಿ—ಪ್ರತಿ ಹಂತದಲ್ಲೂ ಅವರು ತೋರಿದ ಅಪ್ರತಿಮ ಧೈರ್ಯ ಭಾರತೀಯ ಸೇನೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತದ್ದು. ಭಾರತೀಯ ಸೇನೆಯ ಅತಿ ಪ್ರಬಲ ದಾಳಿ ದಳವಾದ ʻ2 ಕಾರ್ಪ್ಸ್’ ಅನ್ನು ಮುನ್ನಡೆಸಿದ ಇವರ ಕಾರ್ಯವೈಖರಿ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸುವಂತಿತ್ತು.

ಕೇವಲ ಯೋಧನಲ್ಲ, ಸಮರತಂತ್ರದ ಮಾಂತ್ರಿಕ
ಯುದ್ಧಭೂಮಿಯಲ್ಲಿ ಗನ್ ಹಿಡಿಯುವುದಷ್ಟೇ ಅಲ್ಲದೆ, ರಾಷ್ಟ್ರದ ರಕ್ಷಣಾ ನೀತಿಗಳನ್ನು ರೂಪಿಸುವಲ್ಲಿ ಇವರು ಅಗ್ರಗಣ್ಯರು. ಲಂಡನ್‌ನ ಕಿಂಗ್ಸ್ ಕಾಲೇಜ್‌ನಿಂದ ಪದವಿ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾ ತಂತ್ರಗಳನ್ನು ಅರಿತಿರುವ ಇವರು, ಕೇವಲ ಒಬ್ಬ ಸೈನಿಕನಾಗಿ ಮಾತ್ರವಲ್ಲದೆ ದೇಶದ ಭದ್ರತಾ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. “ಸೇವೆಯೇ ಪರಮ ಧರ್ಮ” ಎಂಬ ಮಂತ್ರದೊಂದಿಗೆ ಮುನ್ನಡೆದ ಇವರಿಗೆ ಒಲಿದು ಬಂದ ಪರಮ ವಿಶಿಷ್ಠ ಸೇವಾ ಪದಕ ಮತ್ತು ಅತಿ ವಿಶಿಷ್ಠ ಸೇವಾ ಪದಕಗಳು ಇವರ ಕರ್ತವ್ಯನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿವೆ.

ತ್ರಿಶಕ್ತಿಯ ಸಮನ್ವಯ: ಭವಿಷ್ಯದ ಬಲಿಷ್ಠ ಭಾರತ
ಪ್ರಸಕ್ತ ಜಾಗತಿಕ ಸಂಘರ್ಷಗಳ ಕಾಲದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳನ್ನು ಒಗ್ಗೂಡಿಸಿ ಭಾರತವನ್ನು ಅಭೇದ್ಯ ಕೋಟೆಯನ್ನಾಗಿ ಮಾಡುವುದು ಇವರ ಮುಂದಿರುವ ಮಹತ್ತರ ಗುರಿ. ಪಶ್ಚಿಮ ಮತ್ತು ಉತ್ತರ ಗಡಿಗಳ ನಾಡಿಮಿಡಿತ ಅರಿತಿರುವ ಈ ವೀರ ಪುತ್ರನ ನೇತೃತ್ವದಲ್ಲಿ ಭಾರತದ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ದೇಶದ ಭದ್ರತೆಯೇ ಸುಪ್ರೀಂ ಎಂದು ನಂಬಿರುವ ರಾಜಾ ಸುಬ್ರಮಣಿ ಅವರ ಈ ನೇಮಕಾತಿ ಪ್ರತಿ ಭಾರತೀಯನ ಎದೆಯಲ್ಲಿ ಹೆಮ್ಮೆ ಮತ್ತು ಸುರಕ್ಷಿತ ಭಾವವನ್ನು ಮೂಡಿಸಿದೆ.

error: Content is protected !!