
ಬೆಳಗಾವಿ: ಪ್ರಿಯಕರನ ಜೊತೆ ಓಡಿಹೋಗಲು ಪತಿ ಮನೆಗೆ ಕನ್ನ ಹಾಕಿದ್ದ ಪತ್ನಿಯನ್ನ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.

ಹಣಮಂತ ಮಾರಾಪೂರ, ಹಸೀನಾ ನದಾಫ್ ಬಂಧಿತರು.
ಕಳೆದ ಎರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಹಸೀನಾ ನದಾಫ್‌ಗೆ ಶರೀಫ್ ಜೊತೆಗೆ ಮದುವೆಯಾಗಿತ್ತು. ಮದುವೆಯ ನಂತರವೂ ಹಸೀನಾ ಪ್ರಿಯಕರನ ಸಂಪರ್ಕದಲ್ಲಿದ್ದಳು. ಕೊನೆಗೆ ಪ್ರಿಯಕರನ ಜೊತೆ ಓಡಿಹೋಗುವ ಪ್ಲ್ಯಾನ್ ಮಾಡಿದ್ದ ಆಕೆ ಪ್ರಿಯಕರನ ಜೊತೆ ಸೇರಿ ಗಂಡನ ಮನೆಯಲ್ಲಿಯೇ 21 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಳು ಎನ್ನಲಾಗಿದೆ.

ಮೊದಲು ಕಳ್ಳತನದ ಬಗ್ಗೆ ದಿಲ್ಶಾನ್ ನದಾಫ್ ಎಂಬುವವರು ಕಟಕೋಳ ಠಾಣೆಗೆ ದೂರು ನೀಡಿದ್ದರು. ದೂರು ಪಡೆದ ಪೊಲೀಸರು ಕೃತ್ಯ ನಡೆದ 48 ಗಂಟೆಯಲ್ಲಿ ಕಳ್ಳತನ ಮಾಡಿದ್ದ ಪ್ರೇಮಿಗಳನ್ನ ಬಂಧಿಸಿದ್ದಾರೆ. ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಮತ್ತು ಪಿಎಸ್‌ಐ ಬಸವರಾಜ್ ಕೊಣ್ಣೂರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 11 ಸಾವಿರ ಮೌಲ್ಯದ 45 ಗ್ರಾಂ ಬೆಳ್ಳಿಯ ಆಭರಣವನ್ನು ಬಂಧಿತರಿಂದ ವಶಕ್ಕೆ ಪಡೆದುಕೊಂಡಿದ್ದಾರೆ.