ಪಲ್ಗುಣಿಯಲ್ಲಿ ಮೀನುಗಳ ಸಾವಿಗೆ ಸರ್ಕಾರವೇ ಕಾರಣ: ಎಸ್‌ಟಿಪಿ ಸುಧಾರಣೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

ಸುರತ್ಕಲ್: ಪಲ್ಗುಣಿ ನದಿಗೆ ಒಳಚರಂಡಿ ತ್ಯಾಜ್ಯ ನೀರನ್ನು ನೇರವಾಗಿ ಬಿಡುತ್ತಿರುವುದು ಹಾಗೂ ವಿವಿಧ ಭಾಗಗಳಲ್ಲಿ ಒಳಚರಂಡಿ ಸೋರಿಕೆ ಸಂಭವಿಸುತ್ತಿರುವ ಪರಿಣಾಮ ಮೀನುಗಳು ಸಾವನ್ನಪ್ಪುತ್ತಿದ್ದು ಸರಕಾರವೇ ಪರೋಕ್ಷ ಕಾರಣ ಎಂದು ಆರೋಪಿಸಿರುವ ಶಾಸಕ ಡಾ.ಭರತ್ ಶೆಟ್ಟಿ ಅವರು ಸರಕಾರ ಎಸ್ ಟಿ ಪಿ ಗಳ ನಿರ್ವಹಣೆಗೆ ಹೆಚ್ಚಿನ ಅನುದಾನ ಪಾಲಿಕೆಗಳಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಸ್‌ಟಿಪಿಗಳನ್ನು (ಮಲಿನ ನೀರು ಶುದ್ಧೀಕರಣ ಘಟಕ) ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಸರ್ಕಾರದಿಂದ ನಿರ್ವಹಣಾ ವೆಚ್ಚಕ್ಕೆ ಅಗತ್ಯ ಅನುದಾನ ಬಿಡುಗಡೆ ಆಗದೇ ಇರುವುದರಿಂದ ಘಟಕಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಬಹುತೇಕ ಎಸ್‌ಟಿಪಿಗಳಲ್ಲಿ ಅಳವಡಿಸಲಾದ ಜನರೇಟರ್‌ಗಳು ಸಕಾಲದಲ್ಲಿ ದುರಸ್ತಿ ಆಗದೇ ಇರುವ ಕಾರಣ, ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭಗಳಲ್ಲಿ ಒಳಚರಂಡಿ ನೀರನ್ನು ಸಂಸ್ಕರಿಸದೇ ನೇರವಾಗಿ ನದಿಗಳಿಗೆ ಬಿಡಲಾಗುತ್ತಿದೆ. ಇದು ಪರಿಸರಕ್ಕೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದೆ. ಇನ್ನೊಂದೆಡೆ ಜಾಲಚರಗಳುಸಾವನ್ನಪ್ಪುತ್ತಿದೆ ಎಂದು ತಿಳಿಸಿದ್ದಾರೆ.

ಒಳಚರಂಡಿ ತ್ಯಾಜ್ಯ ನೀರನ್ನು ನದಿಗಳಿಗೆ ಹರಿಸುವ ಮೂಲಕ ಸರ್ಕಾರವೇ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಖಂಡನೀಯ ಸಂಗತಿ. ತಕ್ಷಣವೇ ಎಸ್‌ಟಿಪಿಗಳ ಸಮರ್ಪಕ ನಿರ್ವಹಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ, ತಾಂತ್ರಿಕ ದೋಷಗಳನ್ನು ಸರಿಪಡಿಸಿ, ನದಿಗಳ ಮಾಲಿನ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭರತ್ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನದಿಯಲ್ಲೂ ವಿಷ, ಬಾವಿಯಲ್ಲೂ ವಿಷ: ಕೆಂಜಾರ್‌ ಸುತ್ತಮುತ್ತ ಜಲಮೂಲಗಳ ಕಗ್ಗೊಲೆ! ಫಲ್ಗುಣಿ ನದಿಯಲ್ಲಿ ಸತ್ತು ತೇಲುತ್ತಿರುವ ಮೀನುಗಳು

error: Content is protected !!