ನವದೆಹಲಿ: ನೆದರ್ಲೆಂಡ್ಸ್‌ನ ಎಂವಿ ಹೊಂಡಿಯಸ್ (MV Hondius) ಪ್ರವಾಸಿ ಹಡಗಿನಲ್ಲಿ ಹ್ಯಾಂಟಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಹಡಗಿನ ಸಿಬ್ಬಂದಿ ವರ್ಗದಲ್ಲಿ ಇಬ್ಬರು ಭಾರತೀಯರು ಇರುವುದು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), “ಭಾರತಕ್ಕೆ ಈ ಸೋಂಕಿನಿಂದ ಸದ್ಯಕ್ಕೆ ಯಾವುದೇ ಸಾರ್ವಜನಿಕ ಆರೋಗ್ಯ ಭೀತಿ ಇಲ್ಲ” ಎಂದು ತಿಳಿಸುವ ಮೂಲಕ ಜನಸಾಮಾನ್ಯರ ಆತಂಕ ದೂರ ಮಾಡಿದೆ.

ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ನಿರ್ದೇಶಕ ಡಾ. ನವೀನ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿ, “ಹಂತಾವೈರಸ್ ಕೋವಿಡ್-19 ನಂತೆ ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಇದು ಮುಖ್ಯವಾಗಿ ಇಲಿಗಳಂತಹ ದಂಶಕಗಳ ಲಾಲಾರಸ, ಮೂತ್ರ ಅಥವಾ ಮಲದ ಸಂಪರ್ಕಕ್ಕೆ ಬರುವುದರಿಂದ ಹರಡುತ್ತದೆ. ಏಷ್ಯಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ವರದಿಯಾಗಿರುವ ಹಂತಾವೈರಸ್ ತಳಿಗಳು ಮನುಷ್ಯರಿಂದ ಮನುಷ್ಯರಿಗೆ ಹರಡಿದ ಉದಾಹರಣೆಗಳು ಅತ್ಯಂತ ವಿರಳ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸೋಂಕಿನ ಲಕ್ಷಣಗಳು ಸೋಂಕಿತ ಇಲಿಗಳ ಸಂಪರ್ಕಕ್ಕೆ ಬಂದ 1 ರಿಂದ 5 ವಾರಗಳ ನಂತರ ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಇದು ಸಾಮಾನ್ಯ ಜ್ವರ, ಡೆಂಗ್ಯೂ ಅಥವಾ ಇನ್ಫ್ಲುಯೆನ್ಸದಂತೆ ಕಂಡುಬರುವುದರಿಂದ ಪತ್ತೆ ಹಚ್ಚುವುದು ಕಷ್ಟಕರವಾಗಿರುತ್ತದೆ. ತೀವ್ರ ಜ್ವರ, ಮೈಕೈ ನೋವು, ವಾಂತಿ ಮತ್ತು ಸುಸ್ತು ಇದರ ಪ್ರಾಥಮಿಕ ಲಕ್ಷಣಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿ ಉಸಿರಾಟದ ತೊಂದರೆ ಅಥವಾ ಮೂತ್ರಪಿಂಡದ ಸಮಸ್ಯೆಗಳು ಎದುರಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಸೋಂಕನ್ನು ಪತ್ತೆ ಹಚ್ಚಲು ಭಾರತವು ಸುಸಜ್ಜಿತವಾಗಿದೆ ಎಂದು ಡಾ. ನವೀನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಇರುವ 165 ವೈರಲ್ ಸಂಶೋಧನಾ ಪ್ರಯೋಗಾಲಯಗಳಲ್ಲಿ ಆರ್‌ಟಿ-ಪಿಸಿಆರ್ (RT-PCR) ಪರೀಕ್ಷೆಯ ಮೂಲಕ ಹಂತಾವೈರಸ್ ಪತ್ತೆ ಹಚ್ಚುವ ಸೌಲಭ್ಯವಿದೆ. ಹಡಗುಗಳು, ದಾಸ್ತಾನು ಮಳಿಗೆಗಳು ಮತ್ತು ಸರಿಯಾದ ಗಾಳಿ-ಬೆಳಕಿಲ್ಲದ ಪ್ರದೇಶಗಳಲ್ಲಿ ಕೆಲಸ ಮಾಡುವವರು ಹೆಚ್ಚಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಈ ಹಡಗಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೋಂಕಿನ ಅಪಾಯವು ‘ಕಡಿಮೆ’ ಮಟ್ಟದಲ್ಲಿದೆ ಎಂದು ಹೇಳಿದೆ. ಇದು ಜಾಗತಿಕ ಸಾಂಕ್ರಾಮಿಕವಾಗಿ (Pandemic) ಬದಲಾಗುವ ಸಾಧ್ಯತೆ ಇಲ್ಲ ಎಂದು ಡಬ್ಲ್ಯೂಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. ಹವಾಮಾನ ಬದಲಾವಣೆ ಮತ್ತು ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದ ಇಲಿಗಳ ಸಂಖ್ಯೆ ಹೆಚ್ಚಾಗುವುದು ಇಂತಹ ಸೋಂಕುಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.