ನದಿಯಲ್ಲೂ ವಿಷ, ಬಾವಿಯಲ್ಲೂ ವಿಷ: ಕೆಂಜಾರ್‌ ಸುತ್ತಮುತ್ತ ಜಲಮೂಲಗಳ ಕಗ್ಗೊಲೆ! ಫಲ್ಗುಣಿ ನದಿಯಲ್ಲಿ ಸತ್ತು ತೇಲುತ್ತಿರುವ ಮೀನುಗಳು

ಬಜ್ಪೆ (ಮಂಗಳೂರು): ಕರಾವಳಿಯ ಜೀವನಾಡಿ ಫಲ್ಗುಣಿ ನದಿಗೆ ಈಗ ವಿಷಕಾರಿಯಾದ ರಾಸಾಯನಿಕಯುಕ್ತ ತ್ಯಾಜ್ಯ ನೀರು ಸೇರಿಕೊಂಡಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಮಂಗಳೂರಿನ ಬಜ್ಪೆ ಸಮೀಪದ ಕೆಂಜಾರ್ ಪಡ್ಪು ಕೋಡ್ದಬ್ಬು ದೈವಸ್ಥಾನದ ಬಳಿ ಫಲ್ಗುಣಿ ನದಿಯ ನೀರು ಸಂಪೂರ್ಣ ಕಪ್ಪಾಗಿದ್ದು, ನೂರಾರು ಮೀನುಗಳು ಸಾವನ್ನಪ್ಪಿ ತೇಲುತ್ತಿರುವುದು ಕಂಡುಬಂದಿದೆ. ಅದೇ ರೀತಿ ಬಾವಿಯ ನೀರು ಕೂಡ ಕಪ್ಪಾಗಿ ವಾಸನೆಯುಕ್ತವಾಗಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ನದಿ ತೀರದ ಕೆಂಜಾರ್ ಪಡ್ಪು ಪ್ರದೇಶದ ಅನೇಕ ಮನೆಗಳ ಬಾವಿ ನೀರು ಕೂಡ ರಾತ್ರಿ ಬೆಳಗಾಗುವುದರೊಳಗೆ ಕಪ್ಪು ಬಣ್ಣಕ್ಕೆ ತಿರುಗಿದೆ. ಬಿರು ಬೇಸಿಗೆಯ ಈ ಸಮಯದಲ್ಲಿ ನದಿಯ ನೀರಿನ ಮಟ್ಟ ಕುಸಿದಿರುವಾಗಲೇ ಈ ಘಟನೆ ನಡೆದಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬಾವಿ ನೀರು ವಾಸನೆ ಬರುತ್ತಿದ್ದು, ಬಳಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಶುದ್ಧೀಕರಣ ಘಟಕಕ್ಕೆ ಸಂಚಕಾರ?
ಮರವೂರು ಬ್ರಿಜ್ , ಕೆಂಜಾರ್‌ನಲ್ಲಿ ಹಾದು ಹೋಗುವ ಫಲ್ಗುನಿ ನದಿಯ ನೀರಿನ ಬಣ್ಣ ಸಂಪೂರ್ಣ ಕಪ್ಪಾಗಿದ್ದು, ನೂರಾರು ಮೀನುಗಳು ಸತ್ತು ನದಿ ದಂಡೆಯುದ್ದಕ್ಕೂ ಬಿದ್ದಿವೆ. ಇದೇ ಮರವೂರು ಸಮೀಪ ನೀರಿನ ಶುದ್ಧೀಕರಣ ಘಟಕವಿದ್ದು, ಇಲ್ಲಿಂದಲೇ ಬಜ್ಪೆ, ಕರಂಬಾರು, ಮಳವೂರು, ಪೆರ್ಮುದೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಈ ಕಲುಷಿತ ನೀರು ಪೂರೈಕೆಯಾದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ವನ್ಯ ಜೀವಿಗಳು, ಜಾನುವಾರುಗಳಿಗೂ ಇದೇ ನೀರು ಆಸರೆಯಾಗಿದ್ದು, ಅವುಗಳಿಗೂ ಪ್ರಾಣಭೀತಿ ಎದುರಾಗಿದೆ.

ಕೈಗಾರಿಕಾ ತ್ಯಾಜ್ಯದ ಮೇಲೆ ಜನರ ಸಂಶಯ
ನದಿಯ ಹತ್ತಿರದಲ್ಲೇ ಇರುವ ಇಂಡಸ್ಟ್ರಿಯಲ್ ಏರಿಯಾದ (ಕೈಗಾರಿಕಾ ಪ್ರದೇಶ) ಕೆಲವು ಘಟಕಗಳು ತಮ್ಮ ಸಂಸ್ಕರಿಸದ ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಗುಟ್ಟಾಗಿ ಫಲ್ಗುಣಿ ನದಿಗೆ ಹರಿಸುತ್ತಿವೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದೇ ವಿಷಕಾರಿ ನೀರು ನದಿಯಲ್ಲಿ ಮೀನುಗಳ ಮಾರಣಹೋಮಕ್ಕೆ ಕಾರಣವಿರಬಹುದು ಎಂದು ದೂರಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ – ತನಿಖೆ ಆರಂಭ
ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕೆಂಜಾರ್ ಪ್ರದೇಶದ ಬಾವಿಯ ನೀರು ಮತ್ತು ನದಿ ನೀರಿನ ಮಾದರಿಗಳನ್ನು (Samples) ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿಯ ನಂತರವಷ್ಟೇ ನೀರು ಕಪ್ಪಾಗಲು ಮತ್ತು ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿಯಲಿದೆ. ಬಜ್ಪೆ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ರೀತಿ ಈ ಹಿಂದೆಯೂ ನೀರಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಾವಿರಾರು ಮೀನುಗಳು ಸತ್ತಿದ್ದವು.

“ನಮ್ಮ ಜೀವನದ ಆಧಾರವಾಗಿದ್ದ ನದಿ ಮತ್ತು ಬಾವಿಗಳು ಇಂದು ವಿಷಮಯವಾಗುತ್ತಿವೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ತಪ್ಪಿತಸ್ಥ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಸಂತ್ರಸ್ತ ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

error: Content is protected !!