ಮಂಗಳೂರಲ್ಲಿ ಇನ್ನೂ ನಿಂತಿಲ್ಲ ಲಕ್ಕಿ ಸ್ಕೀಮ್ ಗೋಲ್ ಮಾಲ್! BMR ಡ್ರಾ ವಿಜೇತರಿಗೆ ಇನ್ನೂ ಸಿಕ್ಕಿಲ್ವಂತೆ ಬಹುಮಾನ!!

ಮಂಗಳೂರು: ಕರಾವಳಿಯಲ್ಲಿ ನಂಬಿಕೆ ಮಾರಾಟಕ್ಕಿದೆ, ಜನಸಾಮಾನ್ಯರ ಬೆವರು-ಕಣ್ಣೀರಿನ ಹಣ ದರೋಡೆಯಾಗುತ್ತಿದೆ ಎಂಬುದಕ್ಕೆ ಹತ್ತಾರು ಲಕ್ಕಿ ಸ್ಕೀಮ್ ಗಳು ಉದಾಹರಣೆಯಾದದ್ದನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಅವುಗಳ ಸಾಲಿಗೆ ಸೇರಿದ ‘ಬಿಎಂಆರ್ ಸ್ಕೀಮ್’ (BMR Scheme) ತನ್ನ ಗ್ರಾಹಕರಿಗೆ ಇನ್ನೂ ಬಹುಮಾನ ಕೊಡದಿರುವ ಕುರಿತು ದೂರುಗಳು ಬಂದಿವೆ.
ಬಡವರು, ಮಧ್ಯಮ ವರ್ಗದವರು ಹನಿ ಹನಿ ರಕ್ತವನ್ನು ಬೆವರಾಗಿಸಿ ಕೂಡಿಟ್ಟ ಹಣವನ್ನು, ದೊಡ್ಡ ದೊಡ್ಡ ಆಸೆಗಳನ್ನು ತೋರಿಸಿ ಲೂಟಿ ಮಾಡುವ ಇಂಥ ವಂಚಕರ ಜಾಲಗಳು ಮಂಗಳೂರಿನ ಎಲ್ಲೆಂದರಲ್ಲಿ ಬೇರೂರಿವೆ. ಸೀಸನ್ 4ರ ಮುಗಿದು ಒಂದೂವರೆ ವರ್ಷ ಕಳೆದರೂ, ಸಾವಿರಾರು ಜನ ಗ್ರಾಹಕರಿಗೆ ನ್ಯಾಯ ಸಿಕ್ಕಿಲ್ಲ. ಓನರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ, ಮ್ಯಾನೇಜರ್ ಬಾಯಿ ಮುಚ್ಚಿಕೊಂಡಿದ್ದಾನೆ. ಇದು ಕೇವಲ ವ್ಯಾಪಾರಿಕ ಮೋಸವಲ್ಲ, ಹಸಿ ಹಸಿ ಜನದ್ರೋಹ!
ಇದು ವ್ಯವಹಾರವಲ್ಲ, ಬಡವರ ಬದುಕಿನ ಜತೆ ಆಡುತ್ತಿರುವ ಕ್ರೂರ ಚೆಲ್ಲಾಟ. ‘ಬಿಎಂಆರ್ ಸ್ಕೀಮ್’ ಸೀಸನ್ 4ರ ಕಥೆ ಕೇಳಿದರೆ ಎಂಥವರ ಮೈಯಲ್ಲೂ ರಕ್ತ ಕುದಿಯಬೇಕು. ಹಳ್ಳಿಯಿಂದ ಬಂದವರು, ದಿನಗೂಲಿ ಮಾಡುವವರು, ಕಾಸು ಕಾಸಾಗಿ ಕೂಡಿಟ್ಟ ಅಕ್ಷರಶಃ 14,500 ಗ್ರಾಹಕರು ಈ ಕೃತ್ಯದ ಬಲಿಪಶುಗಳಾಗಿದ್ದಾರೆ. ಒಂದೊಂದು ಕಾರ್ಡ್‌ಗೆ 20 ಸಾವಿರ ರೂಪಾಯಿಯಂತೆ ಜನ ಹಣ ಕಟ್ಟಿದ್ದಾರೆ. ಒಂದೇ ಕುಟುಂಬದವರು ನಂಬಿ 6 ಕಾರ್ಡ್‌ಗಳಿಗೆ ಬರೋಬ್ಬರಿ 1,20,000 ರೂಪಾಯಿ ಸುರಿದಿದ್ದಾರೆ. ಆದರೆ ಇಂದಿಗೂ ಕೈಯಲ್ಲಿ ನಯಾಪೈಸೆ ಇಲ್ಲ, ಮನೆ-ವಾಹನ ಎಂಬ ಆಕರ್ಷಕ ಆಸೆ ಕೇವಲ ಮರೀಚಿಕೆಯಾಗಿದೆ. ಕಟ್ಟಿದ ಹಣವನ್ನೂ ವಾಪಸ್ ಕೊಡದೆ, ಕೇಳಲು ಹೋದರೆ ಬೆದರಿಕೆ ಹಾಕುವ ಇವರ ಮುಖವಾಡದ ಹಿಂದೆರುವುದು ಅಪ್ಪಟ ವಂಚಕರ ಗುಂಪು.

ಡಮ್ಮಿ ಹೆಸರುಗಳ ಡ್ರಾ, ಲಕ್ಕಿ ಸ್ಕೀಮ್ ಮಾಯಾಜಾಲ!
ಈ ಹಗರಣದ ಅತಿ ದೊಡ್ಡ ಮೋಸವಿರುವುದು ಇವರ ‘ನಂಬರ್ ಗೇಮ್’ ಹಾಗೂ ಡಮ್ಮಿ ಕಾರ್ಡ್‌ಗಳ ನಾಟಕದಲ್ಲಿದೆ. ಬಿಎಂಆರ್ ಅಥವಾ ಇನ್ನಾವುದೇ ಸ್ಕೀಮ್‌ ನ ಒಳಗೆ ನಡೆಯುವುದೇ ಒಂದು ಕಳ್ಳಾಟ. ಗ್ರಾಹಕರಿಗೆ ಮೋಸ ಮಾಡಲು ಇವರದ್ದೇ ಟೀಮ್‌ ನವರ ನೂರಾರು ಡಮ್ಮಿ ಹೆಸರುಗಳನ್ನು ಸೃಷ್ಟಿಸಿಟ್ಟುಕೊಂಡಿರುತ್ತಾರೆ. ಮನೆ ಅಥವಾ ವಾಹನದಂತಹ ಭಾರೀ ಮೊತ್ತದ ಬಂಪರ್ ಬಹುಮಾನಗಳ ಡ್ರಾ ಬಂದಾಗ, ಆ ಬಹುಮಾನವನ್ನು ನಿಜವಾದ ಯಾವುದೇ ಗ್ರಾಹಕರಿಗೆ ನೀಡುವುದಿಲ್ಲ! ಬದಲಿಗೆ, ತಮ್ಮದೇ ಕಡೆಯ ಡಮ್ಮಿ ವ್ಯಕ್ತಿಗಳಿಗೆ ಅಥವಾ ನಕಲಿ ಹೆಸರುಗಳಿಗೆ ಬಹುಮಾನ ಬಂದಿದೆ ಎಂದು ಊರೆಲ್ಲಾ ಡಂಗೂರ ಸಾರುತ್ತಾರೆ.
“ನಮ್ಮ ಸ್ಕೀಮ್‌ನಲ್ಲಿ ಕಾರು ಸಿಕ್ಕಿದೆ, ಮನೆ ಸಿಕ್ಕಿದೆ” ಎಂದು ಮುಗ್ಧ ಜನರನ್ನು ನಂಬಿಸಲು ಇಂಥದ್ದೊಂದು ಕಟುಕ ನಾಟಕವಾಡಲಾಗುತ್ತದೆ. ಅಸಲಿಗೆ ಆ ಬಹುಮಾನಗಳು ಎಲ್ಲಿಯೂ ಹೋಗುವುದಿಲ್ಲ, ಆಯೋಜಕರ ಕಡೆಯವರೇ ಅದನ್ನು ಹಂಚಿಕೊಂಡು ಜೇಬಿಗಿಳಿಸಿಕೊಳ್ಳುತ್ತಾರೆ. ಜನರಿಗೆ ತೋರಿಸಲು ಮಾತ್ರ ದೊಡ್ಡದೊಂದು ಸುಳ್ಳಿನ ಗೋಪುರ ಕಟ್ಟಿರುತ್ತಾರೆ.

ಜನರ ಪ್ರಶ್ನೆಗಳು ಹೆಚ್ಚಾದಂತೆ, ಕಟ್ಟಿದ ಹಣ ವಾಪಸ್ ಕೇಳಿದಾಗ ಈ ವಂಚಕರ ಅಸಲಿ ಬಣ್ಣ ಬಯಲಾಗುತ್ತದೆ. BMR ಓನರ್ ಗೆ ಫೋನ್ ಮಾಡಿದರೆ ನಂಬರ್ ಸದಾ ಸ್ವಿಚ್ಡ್ ಆಫ್! ಕಚೇರಿಯಲ್ಲಿದ್ದ ನಂಬರ್‌ಗಳೆಲ್ಲವೂ ಒಂದೊಂದಾಗಿ ಗಾಳಿಯಲ್ಲಿ ಮಾಯವಾಗಿವೆ. ಇನ್ನು ಈ ಸ್ಕೀಮ್‌ನ ಮ್ಯಾನೇಜರ್ ಎಂದು ಹೇಳಿಕೊಂಡು ತಿರುಗುತ್ತಿದ್ದವನ ಕತೆಯಂತೂ ಇನ್ನೂ ಕರುಣಾಜನಕ ಹಾಗೂ ಅಸಹ್ಯಕರ. ಗ್ರಾಹಕರು ನಂಬಿ ಫೋನ್ ಮಾಡಿದರೆ ಆತ ಫೋನ್ ಎತ್ತುವುದೇ ಇಲ್ಲ. ಒಂದು ವೇಳೆ ಅದೃಷ್ಟವಶಾತ್ ಫೋನ್ ರಿಸೀವ್ ಮಾಡಿದರೆ, “ನನಗೂ ಆ ಸ್ಕೀಮ್‌ಗೂ ಯಾವುದೇ ಸಂಬಂಧವಿಲ್ಲ, ಓನರ್‌ಗೆ ಫೋನ್ ಮಾಡಿ” ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾನೆ.
ಕಟ್ಟಿದ ಹಣ ಕೊಡಿ ಎಂದು ಹೋದರೆ, “ಸ್ಟಾಕ್ ಇಲ್ಲ, ಮುಂದಿನ ತಿಂಗಳು ಬರುತ್ತೆ” ಎಂದು ಹಸಿ ಹಸಿ ಸುಳ್ಳು ಹೇಳಿ ಸಾಗಹಾಕುತ್ತಾರೆ. ಅಳುತ್ತಾ ಬರುವ ಜನರನ್ನು ಕಂಡು ಕರಗುವ ಬದಲು, “ಕಟ್ಟಿರುವ 20,000 ರೂ.ಗೆ ಬದಲಾಗಿ 17,000 ರೂ. ಕೊಡುತ್ತೇವೆ, ಬೇಕಿದ್ದರೆ ತೆಗೆದುಕೊಂಡು ಹೋಗಿ; ಇಲ್ಲದಿದ್ದರೆ, ಯಾವಾಗ ಬಹುಮಾನ ಬರುತ್ತೋ ಆಗ ಕಾಯಿರಿ!” ಎಂದು ಮಾತನಾಡುತ್ತಾರೆ. ಇವರ ಈ ಉದ್ದಟತನದ ಮಾತುಗಳು ಬಡವರ ನೋವಿನ ಮೇಲೆ ಬರೆಳೆದಂತೆ. ಬೆವರು ಸುರಿಸಿ ಹಣ ಕಟ್ಟಿದವರ ನಂಬರ್ ಅನ್ನು ಬ್ಲಾಕ್ ಮಾಡಿ, ತಲೆಮರೆಸಿಕೊಳ್ಳುವ ಈ ಕಳ್ಳರಿಗೆ ಕಾನೂನಿನ ಬಿಸಿ ತಟ್ಟಲೇಬೇಕು.

ಎಚ್ಚೆತ್ತುಕೊಳ್ಳದಿದ್ದರೆ ಮಂಗಳೂರಿನಲ್ಲಿ ಹೀಗೆಯೇ ಮುಂದುವರಿಯಲಿದೆ ಲೂಟಿ!
ಮಂಗಳೂರಿನಂತಹ ಅಕ್ಷರವಂತ ಕರಾವಳಿ ಭಾಗದಲ್ಲಿ ಇಂಥ ನಕಲಿ ಚಿಟ್ ಫಂಡ್‌ಗಳು ಮತ್ತು ಮೋಸದ ಸ್ಕೀಮ್‌ಗಳು ತಲೆಯೆತ್ತುತ್ತಿರುವುದು ಸಮಾಜದ ದೊಡ್ಡ ದುರಂತ. ಬಡವರ, ಅಮಾಯಕರ ಆಸೆಯನ್ನು ಬಂಡವಾಳ ಮಾಡಿಕೊಂಡು ಕೋಟ್ಯಂತರ ರೂಪಾಯಿ ಲೂಟಿ ಹೊಡೆದು ಪರಾರಿಯಾಗುವ ಇಂಥ ಭೂಗತ ವಂಚಕರಿಗೆ ತಕ್ಕ ಶಾಸ್ತಿ ಆಗಲೇಬೇಕು. ಕೇವಲ ಮಾತಿನಿಂದ ಮರುಳು ಮಾಡುವ ಇವರ ಜಾಲವನ್ನು ಬೇರುಸಹಿತ ಕಿತ್ತುಹಾಕುವ ಸಮಯ ಬಂದಿದೆ. ಪ್ರತಿಯೊಬ್ಬ ಗ್ರಾಹಕರೂ ಒಗ್ಗೂಡಿ, ಬಿಎಂಆರ್ ಸ್ಕೀಮ್‌ನ ಈ ವಂಚಕರ ಬಣ್ಣವನ್ನು ಜಗಜ್ಜಾಹೀರುಗೊಳಿಸಿ, ಕಟ್ಟಿದ ಪ್ರತಿ ಪೈಸೆಯನ್ನು ಬಡ್ಡಿ ಸಮೇತ ವಸೂಲಿ ಮಾಡುವವರೆಗೆ ಇವರಿಗೆ ನಿದ್ದೆ ಬರದಂತೆ ಮಾಡಬೇಕಿದೆ.

Advt
error: Content is protected !!