ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಹಿರಿಯ ನಾಯಕ ಸುವೇಂದು ಅಧಿಕಾರಿ ಅವರು ಶುಕ್ರವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಶನಿವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ನಿರ್ಣಾಯಕ ಸಭೆಯಲ್ಲಿ ನೂತನ ಶಾಸಕರೆಲ್ಲರೂ ಸುವೇಂದು ಅಧಿಕಾರಿ ಅವರ ಹೆಸರನ್ನು ಪ್ರಸ್ತಾಪಿಸಿ, ಅನುಮೋದಿಸಿದರು. ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, “ಪಶ್ಚಿಮ ಬಂಗಾಳ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸುವೇಂದು ಅಧಿಕಾರಿ ಆಯ್ಕೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಬಂಗಾಳ ಅಭಿವೃದ್ಧಿಯ ಹೊಸ ಹಾದಿ ತುಳಿಯಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಸುವೇಂದು ಅಧಿಕಾರಿ ಅವರು ಇಂದು ಸಂಜೆ 6:30ಕ್ಕೆ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಎನ್. ರವಿ ಅವರನ್ನು ಭೇಟಿ ಮಾಡಲಿದ್ದಾರೆ. ತಮ್ಮನ್ನು ಬೆಂಬಲಿಸುವ ಶಾಸಕರ ಪಟ್ಟಿಯನ್ನು ಸಲ್ಲಿಸಿ, ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.

ಮೇ 9 ರಂದು (ಶನಿವಾರ) ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ನಿರೀಕ್ಷೆಯಿದೆ.

ದಶಕಗಳ ಕಾಲದ ಕಮ್ಯುನಿಸ್ಟ್ ಮತ್ತು ತೃಣಮೂಲ ಕಾಂಗ್ರೆಸ್ ಆಳ್ವಿಕೆಯ ನಂತರ ಬಂಗಾಳದಲ್ಲಿ ಕೇಸರಿ ಪಡೆ ಅಧಿಕಾರ ಹಿಡಿಯುತ್ತಿರುವುದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.