ಮಂಗಳೂರು: ಯಾವುದೇ ಭಾಷೆಯ ಸಾಹಿತ್ಯದ ಉಳಿವು ಓದುಗರ ಮೇಲೆ ಅವಲಂಭಿಸಿದೆ. ಕೊಂಕಣಿ ಭಾಷೆಯಲ್ಲಿ ಕ್ಷೀಣಿಸುತ್ತಿರುವ ವಾಚನ ಹವ್ಯಾಸಕ್ಕೆ ಜೀವ ತುಂಬುವ ನಿಟ್ಟಿನಲ್ಲಿ, ಹೊಸ ಮಾಧ್ಯಮದ ಮೂಲಕ ವಿಂಚ್ಣಾರ್ ಮೊತಿಯಾಂ(ಆಯ್ದ ಮುತ್ತುಗಳು) ಎಂಬ ವಿಡಿಯೊ ಸರಣಿ ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸುತ್ತಿದೆ. ಕಳೆದ 46 ವರ್ಷಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಸಂವರ್ಧನೆಗಾಗಿ ದುಡಿಯುತ್ತಿರುವ ಸಂತ ಅಲೊಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಕಳೆದ ಒಂದು ವರ್ಷದಿಂದ ಬೊಲ್ಕಾಂವ್ (ಬಾಲ್ಕನಿ) ಎಂಬ ವಿನೂತನ ಕಾರ್ಯಕ್ರವನ್ನು ಆಯೋಜಿಸುತ್ತಾ ಬಂದಿದ್ದು, ಪ್ರಸ್ತುತ ವಿಂಚ್ಣಾರ್ ಮೊತಿಯಾಂ ಕಾರ್ಯಕ್ರಮದಲ್ಲಿ ಓದುಗರು ತಮಗೆ ಇಷ್ಟವಾದ ಸಾಹಿತ್ಯ ಕೃತಿಯ ಬಗ್ಗೆ ಮಾತನಾಡುತ್ತಾರೆ.

ಈ ಕಾರ್ಯಕ್ರಮ ತಿಂಗಳ ಪ್ರತೀ ಮೊದಲ ಹಾಗೂ ಮೂರನೇ ಶನಿವಾರ ವಿಶ್ವವಿದ್ಯಾಲಯದ ಯೂ ಟ್ಯೂಬ್ ಚ್ಯಾನೆಲ್‌ನಲ್ಲಿ ಪ್ರಸಾರವಾಗುತ್ತದೆ ಮತ್ತು ಅಲ್ಲಿ ಅಧ್ಯಯನಕ್ಕೆ ಲಭ್ಯವಿದೆ. ಇದರಿಂದ ಕೊಂಕಣಿ ಸಾಹಿತ್ಯ ಅಧ್ಯಯನ ಮಾಡುವ ವಿದ್ಯಾರ್ಥಿ ಮತ್ತು ಬೋಧಿಸುವ ಶಿಕ್ಷಕರಿಗೂ ಪ್ರಯೋಜನವಾಗಲಿದೆ” ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಫಾ. ಪ್ರವೀಣ್ ಮಾರ್ಟಿಸ್. ಜೆ.ಸ. ಹೇಳಿದರು.

“ಕಳೆದ 44 ವರ್ಷಗಳಿಂದ ಕೊಂಕಣಿ ಸಂಸ್ಥೆ ಅಮರ್ ಕೊಂಕಣಿ ಎಂಬ ಸಂಶೋಧನಾ ಪತ್ರಿಕೆಯನ್ನೂ ನಡೆಸಿಕೊಂಡು ಬಂದಿದ್ದು, ಡಾ. ಫಾ. ವಿಜಯ್ ಡಿ ಸೊಜಾ ಅವರ ನೇತೃತ್ವದಲ್ಲಿ ಸದ್ಯದಲ್ಲೆ ಕೊಂಕಣಿ ಭಾಷಾ ಸಂಶೊಧನಾ ಕಾರ್ಯ ಆರಂಭವಾಗಲಿದೆ” ಎಂದು ಡಾ. ಫಾ. ಮಾರ್ಟಿಸ್ ತಿಳಿಸಿದರು.
ಡಾ. ಮಾರ್ಟಿಸ್ ಕೊಂಕಣಿ ಸಾಹಿತ್ಯದ ಮೇರು ಕೃತಿಗಳನ್ನು ಓದುಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ತಯಾರಿಸಿಸ ಕೊಂಕಣಿ ಸಂಸ್ಥೆ ತಯಾರಿಸಿದ ವಿಂಚ್ಣಾರ್ ಮೊತಿಯಾಂ (ಆಯ್ದ ಮುತ್ತುಗಳು) ವಿಡಿಯೊ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.

ಸರಣಿ ಕಾರ್ಯಕ್ರಮದ ರೂವಾರಿ, ಕೊಂಕಣಿ ಸಂಸ್ಥೆಯ ಸಲಹೆಗಾರ ಡಾ| ಆಲ್ವಿನ್ ಡೆʼಸಾ ವಿಂಚ್ಣಾರ್ ಮೊತಿಯಾಂ ಕಾರ್ಯಕ್ರಮದ ರೂಪು- ರೇಷೆ ಮತ್ತು ವಿನ್ಯಾಸದ ಕುರಿತು ಕಿರು ಪರಿಚಯ ನೀಡಿದರು. ಈ ಕಾರ್ಯಕ್ರಮ ಸರಣಿಯಿಂದ ವಾಚನ ಹವ್ಯಾಸ ಬೆಳೆಯುವ ಭರವಸೆಯಿದೆ ಎಂದು ಆವರು ಅಭಿಪ್ರಾಯಪಟ್ಟರು. ಇದೇ ಮಾದರಿಯಲ್ಲಿ ಸಾಹಿತ್ಯ ವಿಮರ್ಶೆಯ ಸಿದ್ದಾಂತಗಳನ್ನು ಓದುಗರಿಗೆ ಸರಳವಾಗಿ ಹೇಳುವ ಸರಣಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಸದ್ಯದಲ್ಲೇ ಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು.
ಬೊಲ್ಕಾಂವ್ ಕಾರ್ಯಕ್ರಮದ ಸಂಚಾಲಕ ಸಾಹಿತಿ, ಪತ್ರಕರ್ತ ಎಚ್. ಎಮ್. ಪೆರ್ನಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊಂಕಣಿ ಸಂಸ್ಥೆಯ ಕಾರ್ಯಕ್ರಮ ಸಂಚಾಲಕ ಪಿಂಟೊ ವಾಮಂಜೂರು ವಂದಿಸಿದರು. ಕು. ವನಿತಾ ಸಹಕರಿಸಿದರು.