
ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರ ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆ
ಮಂಗಳೂರು: ಸಹಕಾರವನ್ನು ಜೀವನದ ಧೈಯವನ್ನಾಗಿ, ಜನಸೇವೆಯನ್ನು ಜೀವನದ ಪರಮ ಗುರಿಯನ್ನಾಗಿ. ತ್ಯಾಗವನ್ನು ಬದುಕಿನ ಮಾರ್ಗವನ್ನಾಗಿ ಸ್ವೀಕರಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಸಹಕಾರದ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡ ಮಹಾನ್ ಚೇತನ, ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಬದುಕು ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸಾರ್ಥಕ ಸಮಾಜಮುಖಿ ಸೇವೆಯ ಕುರಿತಾದ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರು ಬರೆದಿರುವ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಬ್ಯಾಂಕ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತಾಡಿದ ಅವರು, “ನಮ್ಮ ಬ್ಯಾಂಕಿನ ಪ್ರಧಾನ ಕಚೇರಿಯ ಕಿರಿಯ ನಿರೀಕ್ಷಕರು ಹಾಗೂ ಪತ್ರಿಕೋದ್ಯಮದಲ್ಲಿ ಕ್ರೀಡಾ ಬರಹಗಾರರಾಗಿ ಸುಮಾರು 35 ವರ್ಷಗಳಿಂದ ಗುರುತಿಸಿಕೊಂಡಿರುವ ಜಗದೀಶ್ಚಂದ್ರ ಅಂಚನ್ ಅವರು ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ಲೇಖಕರಾಗಿದ್ದಾರೆ. ಮೊಳಹಳ್ಳಿ ಅವರು ಎತ್ತಿನಗಾಡಿಯಲ್ಲಿ ಸಂಚರಿಸಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಕುಂದಾಪುರದ ಮೊಳಹಳ್ಳಿಯಲ್ಲಿ ಜನಿಸಿದರೂ ಪುತ್ತೂರಿನಲ್ಲಿ ನೆಲೆಸಿ ವಕೀಲ ವೃತ್ತಿಯಲ್ಲಿದ್ದರೂ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದವರು. ಇಂತವರು ಕುರಿತಾದ ಕೃತಿಯು ನಮ್ಮೆಲ್ಲರಿಗೆ ಮಾರ್ಗದರ್ಶಿಯಾಗಿರಲಿ” ಎಂದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಇಒ ಗೋಪಿನಾಥ್ ಭಟ್, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ನಬಾರ್ಡ್ ನ ಸಂಗೀತ, ರಮೇಶ್, ಸುಧೀರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.