ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಜಯಭೇರಿ ಬಾರಿಸಿದೆ. ಮಂಜೇಶ್ವರದಲ್ಲಿ ಎ.ಕೆ.ಎಂ.ಅಶ್ರಫ್ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಕಲ್ಲಟ್ರ ಮಾಹಿನ್ ಹಾಜಿ ಅವರು ತಮ್ಮ ಪ್ರತಿಸ್ಪರ್ಧಿಗಳನ್ನು ದಾಖಲೆ ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಮಂಜೇಶ್ವರ: ಸುರೇಂದ್ರನ್ ವಿರುದ್ಧ ಅಶ್ರಫ್‌ಗೆ ಐತಿಹಾಸಿಕ ಗೆಲುವು
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಅವರು 31,193 ಮತಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಅಶ್ರಫ್ ಅವರು ಒಟ್ಟು 96,367 ಮತಗಳನ್ನು ಗಳಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಕಳೆದ ಚುನಾವಣೆಯಲ್ಲಿ ಕೇವಲ 745 ಮತಗಳ ಅಂತರದಿಂದ ಗೆದ್ದಿದ್ದ ಅಶ್ರಫ್, ಈ ಬಾರಿ ಗೆಲುವಿನ ಅಂತರವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುವುದು ವಿಶೇಷ.

ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ 65,174 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಎಲ್ ಡಿಎಫ್ (LDF) ಅಭ್ಯರ್ಥಿ ಕೆ.ಆರ್.ಜಯಾನಂದ 20,365 ಮತಗಳೊಂದಿಗೆ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಕಾಸರಗೋಡು: ಮಾಹಿನ್ ಹಾಜಿ ವಿಜಯಭೇರಿ
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಂ.ಎ. ಅಶ್ವಿನಿ ಅವರ ವಿರುದ್ಧ 22,698 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. 16 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಾಗ ಮಾಹಿನ್ ಹಾಜಿ 76,396 ಮತಗಳನ್ನು ಪಡೆದರೆ, ಎನ್ ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ 53,698 ಮತಗಳನ್ನು ಗಳಿಸಲಷ್ಟೇ ಶಕ್ತರಾದರು.

ಇಲ್ಲಿಯೂ ಸಹ ಎಲ್ ಡಿಎಫ್ ಅಭ್ಯರ್ಥಿ ಶಾನ್ ವಾಝ್ ಪಾದೂರು ಅವರು 36,678 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಎರಡು ಕ್ಷೇತ್ರಗಳ ಅಧಿಕೃತ ಘೋಷಣೆಯನ್ನು ಚುನಾವಣಾ ಆಯೋಗವು ಇನ್ನಷ್ಟೇ ಹೊರಡಿಸಬೇಕಿದೆ.
ಈ ಫಲಿತಾಂಶವು ಕಾಸರಗೋಡು ಜಿಲ್ಲೆಯಲ್ಲಿ ಯುಡಿಎಫ್ ಮೈತ್ರಿಕೂಟದ ಪಾರಮ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.