ಮೂಡುಬಿದ್ರೆ: ನೆಲ್ಲಿಕಾರು ಪರಿಸರದಲ್ಲಿ ವೃದ್ಧೆಯೊಬ್ಬರು ಬಾವಿಗೆ ಬಿದ್ದು ಗಾಯಗೊಂಡ ಬೆನ್ನಲ್ಲೇ ಅದೇ ಗ್ರಾಮದ ರಿಕ್ಷಾ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಿಕ್ಷಾ ಚಾಲಕ ಸತೀಶ್ ಶೆಟ್ಟಿ (45), ಚಿನ್ನಾಭರಣಕ್ಕಾಗಿ ವೃದ್ಧೆಯನ್ನು ಬಾವಿಗೆ ತಳ್ಳಿ ಬಳಿಕ ಆಕೆ ಬದುಕುಳಿದಿದ್ದಾಳೆಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ವೃದ್ಧೆ ಪದ್ಮಾವತಿ (70) ಅವರು ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ್ದ ರಿಕ್ಷಾ ಚಾಲಕ ಸತೀಶ್ ಶೆಟ್ಟಿ (45), ಆಕೆಯನ್ನು ಬ್ಯಾಂಕ್ ಹಾಗೂ ಅಂಗಡಿಗಳಿಗೆ ಕರೆದೊಯ್ಯುವ ಮೂಲಕ ವಿಶ್ವಾಸ ಗಳಿಸಿದ್ದನು. ಈ ವಿಶ್ವಾಸವನ್ನೇ ಬಂಡವಾಳವಾಗಿಸಿಕೊಂಡ ಆತ, ವೃದ್ಧೆಯ ಮನೆಯಲ್ಲಿದ್ದ ಹಳೆಯ ಚಿನ್ನಾಭರಣಗಳನ್ನು ದೋಚಲು ಸಂಚು ರೂಪಿಸಿದ್ದನು. ಕಳೆದ ಶುಕ್ರವಾರ ರಾತ್ರಿ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದ್ದು, ಬಳಿಕ ಸತೀಶ್ ವೃದ್ಧೆಯನ್ನು ಬಾವಿಗೆ ತಳ್ಳಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದನು.

ತಾನು ಬಾವಿಗೆ ದೂಡಿದ ವೃದ್ಧೆ ಮೃತಪಟ್ಟಿದ್ದಾರೆಂದೇ ಭಾವಿಸಿದ್ದ ಸತೀಶ್‌ಗೆ ಮರುದಿನ ಶಾಕಿಂಗ್ ಸುದ್ದಿ ಕಾದಿತ್ತು. ಬಾವಿಗೆ ಬಿದ್ದಿದ್ದ ಪದ್ಮಾವತಿ ಅವರು ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸತೀಶ್ ಗಾಬರಿಗೊಂಡಿದ್ದನು. ತಾನು ಸಿಕ್ಕಿಬೀಳುವ ಭಯದಿಂದ ಆತ ರೆಂಜಾಳದ ಹಾಡಿ ಭಾಗಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸತೀಶ್ ಶೆಟ್ಟಿಯ ಆಟೋ ರಿಕ್ಷಾವನ್ನು ಪೊಲೀಸರು ತಪಾಸಣೆ ನಡೆಸಿದಾಗ, ಅದರಲ್ಲಿ ವೃದ್ಧೆಗೆ ಸೇರಿದ ಎರಡು ಬಳೆ ಹಾಗೂ ಒಂದು ಚಿನ್ನದ ಚೈನ್ ಪತ್ತೆಯಾಗಿದೆ. ಮೃತ ಸತೀಶ್‌ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಮೂಡುಬಿದಿರೆ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.