
ಕಿನ್ನಿಗೋಳಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ನೇತೃತ್ವದಲ್ಲಿ ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಆಶ್ರಯದಲ್ಲಿ ಮುಲ್ಕಿ ಮತ್ತು ಮೂಡಬಿದ್ರೆ ಬ್ಲಾಕ್ ಕಾಂಗ್ರೇಸ್ ಸಮಿತಿಯ ಸಹಕಾರದಿಂದ ಅಯೋಧ್ಯ ಶ್ರೀರಾಮ ಮಂದಿರದ ಹುಂಡಿಯ ಕಳವು ಆರೋಪದ ಕುರಿತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಅಗ್ರಹಿಸಿ ಬೃಹತ್ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ಶನಿವಾರ ಸಂಜೆ ನಡೆಯಿತು.
ಕಿನ್ನಿಗೋಳಿ “ರಾಜಾಂಗಣ ಹಾಲ್” ನಿಂದ “ಕಿನ್ನಿಗೋಳಿ ಜಂಕ್ಷನ್” ವರೆಗೆ ಸಾಗಿಬಂದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಪಾಲ್ಗೊಂಡಿದ್ದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್
ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಅವರು, “ರಾಮಮಂದಿರ ಲೂಟಿಯಲ್ಲಿ ಕೇಂದ್ರ ಬಿಜೆಪಿ ಸರಕಾರ ಮತ್ತು ಬಿಜೆಪಿ ನಾಯಕರ ನೇರ ಕೈವಾಡವಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದರು. ಬಿಜೆಪಿಯವರು ಧರ್ಮವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸುತ್ತಾರೆ ಹೀಗಾಗಿ ಬಿಜೆಪಿಗರದ್ದು ಕಪಟ ಹಿಂದುತ್ವ, ಕಾಂಗ್ರೆಸಿಗರು ನೈಜ ಹಿಂದುತ್ವದ ಪ್ರತಿಪಾದಕರಾಗಿದ್ದಾರೆ. ಹೀಗಾಗಿ ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಮಿಥುನ್ ರೈ ಮಾತಾಡಿ, ”ರಾಮಮಂದಿರವನ್ನು ಚುನಾವಣೆಯಲ್ಲಿ ಬಳಸಿಕೊಂಡು ಗೆದ್ದಿರುವ ಬಿಜೆಪಿಯವರು ರಾಮಮಂದಿರವನ್ನೇ ಕೊಳ್ಳೆ ಹೊಡೆದಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟವಾಗಿದೆ. ಜಿಲ್ಲೆಯ ಮಠಾಧಿಪತಿಗಳು, ಸ್ವಾಮೀಜಿಗಳು ಈ ಹೋರಾಟವನ್ನು ಮುನ್ನಡೆಸಿಕೊಂಡು ಹೋಗಬೇಕು. ಅಯೋಧ್ಯೆಯವರೆಗೆ ಈ ಹೋರಾಟ ಮುಂದುವರಿಯಬೇಕು“ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಡೆನ್ನಿಸ್ ಡಿ’ಸಿಲ್ವಾ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡಬಿದ್ರೆ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಕುಮಾರ್ ಪೂಜಾರಿ ಇರುವೈಲ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್ ದೇವಾಡಿಗ ಪಂಜ ಮತ್ತಿತರರು ಉಪಸ್ಥಿತರಿದ್ದರು.