ಮುಂಬೈ: ಡಿಜಿಟಲ್ ಪಾವತಿ ಲೋಕದ ದೈತ್ಯ ಸಂಸ್ಥೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಾಟಿಯೇಟು ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಲಾಗಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಆರ್‌ಬಿಐ ಶುಕ್ರವಾರ ಅಧಿಕೃತವಾಗಿ ರದ್ದುಗೊಳಿಸಿದೆ. ಬ್ಯಾಂಕ್‌ನ ಆಡಳಿತ ಮಂಡಳಿಯ ನಡವಳಿಕೆಯು ಠೇವಣಿದಾರರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಗಂಭೀರ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ.

ನಮ್ಮ ಸೇವೆಗಳು ಸ್ಥಗಿತಗೊಳ್ಳಲ್ಲ ಎಂದ ಪೇಟಿಎಂ:
ಪರವಾನಗಿ ರದ್ದತಿಯ ಬೆನ್ನಲ್ಲೇ ಗ್ರಾಹಕರಲ್ಲಿ ಆತಂಕ ಶುರುವಾಗಿದ್ದು, ಪೇಟಿಎಂ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದೆ. “ಆರ್‌ಬಿಐ ನಿರ್ಧಾರದ ಹೊರತಾಗಿಯೂ ಪೇಟಿಎಂನ ಇತರ ಸೇವೆಗಳು (UPI, ವ್ಯಾಲೆಟ್ ಇತ್ಯಾದಿ) ಎಂದಿನಂತೆ ಕಾರ್ಯನಿರ್ವಹಿಸಲಿವೆ, ಗ್ರಾಹಕರು ಚಿಂತಿಸಬೇಕಿಲ್ಲ” ಎಂದು ಹೇಳಿದೆ. ಅಲ್ಲದೆ, ಆರ್‌ಬಿಐ ನಿರ್ಧಾರದ ವಿರುದ್ಧ ಪೇಟಿಎಂ ಕಾನೂನು ಹೋರಾಟ ನಡೆಸುವ ಸಾಧ್ಯತೆಯೂ ಇದೆ.

ಯಾಕೆ ಈ ಕಠಿಣ ಕ್ರಮ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ವ್ಯವಹಾರಗಳನ್ನು ನಡೆಸುವಲ್ಲಿ ನಿಯಮಗಳನ್ನು ಗಾಳಿಗೆ ತೂರಿದೆ ಎಂಬುದು ಆರ್‌ಬಿಐ ವಾದ. “ಬ್ಯಾಂಕ್‌ನ ವ್ಯವಹಾರಗಳು ಠೇವಣಿದಾರರ ಹಿತಾಸಕ್ತಿಗೆ ಪೂರಕವಾಗಿಲ್ಲ. ಭವಿಷ್ಯದಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಸದಂತೆ ಇದನ್ನು ನಿಷೇಧಿಸಲಾಗಿದೆ” ಎಂದು ಆರ್‌ಬಿಐ ಖಡಕ್ ಆಗಿ ತಿಳಿಸಿದೆ. 2022ರಿಂದಲೇ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಪೇಟಿಎಂಗೆ ನಿರ್ಬಂಧ ಹೇರಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಗ್ರಾಹಕರ ಹಣ ಸುರಕ್ಷಿತವೇ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಆರ್‌ಬಿಐ ಹೇಳಿದೆ. ಆದರೂ, ಗ್ರಾಹಕರ ಠೇವಣಿ ಹಣವನ್ನು ಮರುಪಾವತಿಸಲು ಬೇಕಾದಷ್ಟು ನಗದು ಬ್ಯಾಂಕ್ ಬಳಿ ಇದೆ ಎಂದು ಆರ್‌ಬಿಐ ಭರವಸೆ ನೀಡಿದೆ. ಹೀಗಾಗಿ ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವುದೇ ಅಪಾಯವಿಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಹೊಸ ಠೇವಣಿ ಅಥವಾ ಬ್ಯಾಂಕಿಂಗ್ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ.