
ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ತಾಲೂಕಿನ ಬೈಕಾಡಿಯಲ್ಲಿ ಮಂಗಳವಾರ ತಡರಾತ್ರಿ ನಟೋರಿಯಸ್ ರೌಡಿ ಶೀಟರ್ ಸುಜಿತ್ ಪಿಂಟೋ ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಪ್ರಕರಣದ ಆರೋಪಿ ರಿಕ್ಷಾ ಚಾಲಕ ಪ್ರಮೋದ್ ಎಂದು ಗುರುತಿಸಲಾಗಿದ್ದು ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಜಿತ್ ಪಿಂಟೋ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಲಾಗಿದ್ದು ಘಟನಾಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ದೌಡಾಯಿಸಿದ್ದಾರೆ.
ಪ್ರಮೋದ್ ರಿಕ್ಷಾ ಚಾಲಕನಾಗಿದ್ದು ಸುಜಿತ್ ಮನೆಗೆ ಬಾಡಿಗೆಗೆ ಹೋಗುತ್ತಿದ್ದ. ಸುಜಿತ್ ಹಣ ಕೊಡಲು ಬಾಕಿಯಿರಿಸಿದ್ದು ಇದೇ ಕೋಪದಲ್ಲಿ ಇಂದು ಕರೆದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿದ್ದಾರೆ. ಸುಜಿತ್ ಪಿಂಟೋ ಮೇಲೆ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೊಲೆ ಮತ್ತಿತರ ಗಂಭೀರ ಪ್ರಕರಣಗಳು ಇವೆ.
ಈತ ಈ ಹಿಂದೆ 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲೀಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ.

2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದಲ್ಲಿ ನಡೆದ ಯೋಗೀಶ್ ಹತ್ಯೆ ಪ್ರಕರಣದಲ್ಲೂ ಸುಜಿತ್ ಪಿಂಟೊ ಮತ್ತು ಆತನ ಸಹೋದರ ರೋಹಿತ್ ಪಿಂಟೊ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದರು. ಹಿರಿಯಡ್ಕದ ರೌಡಿಶೀಟರ್ ವರ್ವಾಡಿ ಪ್ರವೀಣ್ ಕುಲಾಲ್ ಹತ್ಯೆಯಲ್ಲೂ ಸುಜಿತ್ ಆರೋಪಿಯಾಗಿದ್ದ. ಹಿರಿಯಡ್ಕ, ಮಲ್ಪೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ಹೆಸರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿತ್ತು.
