ಕೋನಾರ್ಕ್: ವಿಶ್ವವಿಖ್ಯಾತ ಕೋನಾರ್ಕ್ ಸೂರ್ಯ ದೇವಾಲಯದ ಒಳಗಿನ ರಹಸ್ಯಗಳು ಈಗ ಜಗತ್ತಿಗೆ ತಿಳಿಯುವ ಕಾಲ ಹತ್ತಿರ ಬಂದಿದೆ. ಬ್ರಿಟಿಷರ ಕಾಲದಲ್ಲಿ ಅಂದರೆ 1903 ರಲ್ಲಿ ದೇವಾಲಯದ ಭದ್ರತೆಗಾಗಿ ಅದರೊಳಗೆ ತುಂಬಲಾಗಿದ್ದ ಮರಳನ್ನು ತೆಗೆಯುವ ಐತಿಹಾಸಿಕ ಪ್ರಕ್ರಿಯೆಯನ್ನು ಭಾರತೀಯ ಪುರಾತತ್ವ ಇಲಾಖೆ (ASI) ಇಂದು ಅಧಿಕೃತವಾಗಿ ಆರಂಭಿಸಿದೆ.

ಬ್ರಿಟಿಷರು ಮರಳು ತುಂಬಿದ್ದೇಕೆ?
13ನೇ ಶತಮಾನದ ಈ ಅದ್ಭುತ ಶಿಲ್ಪಕಲೆ ಶಿಥಿಲಗೊಳ್ಳುವುದನ್ನು ತಡೆಯಲು ಮತ್ತು ದೇವಾಲಯದ ಮೇಲ್ಛಾವಣಿ ಕುಸಿಯದಂತೆ ನೋಡಿಕೊಳ್ಳಲು 1903 ರಲ್ಲಿ ಬ್ರಿಟಿಷ್ ಎಂಜಿನಿಯರ್‌ಗಳು ದೇವಾಲಯದ ʻಜಗಮೋಹನ’ (ಸಭಾಂಗಣ) ಭಾಗವನ್ನು ಸಂಪೂರ್ಣವಾಗಿ ಮರಳಿನಿಂದ ತುಂಬಿ ಅದರ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಿದ್ದರು. ಸುಮಾರು 123 ವರ್ಷಗಳಿಂದ ಈ ಮರಳು ದೇವಾಲಯಕ್ಕೆ ಆಧಾರವಾಗಿತ್ತು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಈ ಮರಳು ವರ್ಷ ಕಳೆದಂತೆ ಕುಸಿಯುತ್ತಿದ್ದು, ಒಳಗಿನ ಕಲ್ಲಿನ ರಚನೆಗಳ ಮೇಲೆ ಅಸಮತೋಲಿತ ಒತ್ತಡ ಹೇರುತ್ತಿದೆ. ಇದನ್ನು ಹಾಗೆಯೇ ಬಿಟ್ಟರೆ ದೇವಾಲಯದ ಸ್ಥಿರತೆಗೆ ಧಕ್ಕೆ ಬರಬಹುದು ಎಂದು ಐಐಟಿ ಮದ್ರಾಸ್ ತಜ್ಞರು ವರದಿ ನೀಡಿದ್ದರು. ಹೀಗಾಗಿ ಮರಳನ್ನು ತೆಗೆದು, ಆ ಜಾಗದಲ್ಲಿ ದೇವಾಲಯಕ್ಕೆ ಹೆಚ್ಚಿನ ಬಲ ನೀಡುವ ಹೊಸ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ.

ಎಎಸ್‌ಐ ನಡೆಸುತ್ತಿರುವ ಹೈಟೆಕ್ ಕಾರ್ಯಾಚರಣೆ ಹೀಗಿದೆ…
ಜೀರೋ ವೈಬ್ರೇಶನ್ ತಂತ್ರಜ್ಞಾನದ ಮೂಲಕ ದೇವಾಲಯದ ಗೋಡೆಗಳಿಗೆ ಯಾವುದೇ ಹಾನಿಯಾಗದಂತೆ ‘ಡೈಮಂಡ್ ಡ್ರಿಲ್ಲಿಂಗ್’ ಮೂಲಕ ಪಶ್ಚಿಮ ಗೋಡೆಯಲ್ಲಿ ಒಂದು ಸಣ್ಣ ದಾರಿಯನ್ನು ಕೊರೆಯಲಾಗಿದೆ.ಮರಳನ್ನು ಹೊರತೆಗೆಯಲು ರೋಬೋಟಿಕ್ ಟ್ರಾಲಿಗಳನ್ನು ಬಳಸಲಾಗುತ್ತಿದೆ. ಮರಳು ತೆಗೆಯುವಾಗ ಕಟ್ಟಡದ ಮೇಲೆ ಉಂಟಾಗುವ ಒತ್ತಡವನ್ನು ರಿಯಲ್ ಟೈಮ್‌ನಲ್ಲಿ ಸೆನ್ಸರ್‌ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಇಡೀ ಪ್ರಕ್ರಿಯೆಯು ಮುಗಿಯಲು ಕನಿಷ್ಠ 3 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆ ಯಶಸ್ವಿಯಾದರೆ, 100 ವರ್ಷಗಳ ನಂತರ ಸಾಮಾನ್ಯ ಜನರಿಗೂ ಸೂರ್ಯ ದೇವಾಲಯದ ಒಳಗಿನ ಅಸಲಿ ಶಿಲ್ಪಕಲೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಇದು ಭಾರತೀಯ ಪುರಾತತ್ವ ಇಲಾಖೆಯ ಇತಿಹಾಸದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಸೂಕ್ಷ್ಮ ಸಂರಕ್ಷಣಾ ಕಾರ್ಯ ಎಂದು ಬಣ್ಣಿಸಲಾಗಿದೆ.