
ಮೀನು ಮಾರುಕಟ್ಟೆಯಲ್ಲಿ ಕಸವಾಗಿ ಎಸೆಯುವ ಮೀನಿನ ಹುರುಪೆಗಳು ಇನ್ಮುಂದೆ ಮನುಷ್ಯನ ಮುರಿದ ಮೂಳೆಗಳನ್ನು ಜೋಡಿಸಲಿವೆ. ಹೌದು, ಕೇಂದ್ರ ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆಯ(CIFT) ವಿಜ್ಞಾನಿಗಳು ಮೀನಿನ ತ್ಯಾಜ್ಯದಿಂದ ಹಲ್ಲು ಮತ್ತು ಮೂಳೆಯ ಗಾಯಗಳನ್ನು ಶೀಘ್ರವಾಗಿ ಗುಣಪಡಿಸುವ “ನ್ಯಾನೋ ಫೈಬರ್ ಗ್ರಾಫ್ಟ್” ಸಿದ್ಧಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಸಾಮಾನ್ಯವಾಗಿ ಮೀನು ಸಂಸ್ಕರಣೆಯ ವೇಳೆ ಅದರ ಹುರುಪೆ, ತಲೆ ಸೇರಿದಂತೆ ಶೇ. 60ರಷ್ಟು ಭಾಗ ವ್ಯರ್ಥವಾಗುತ್ತದೆ. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 40 ರಿಂದ 60 ಲಕ್ಷ ಟನ್ ಮೀನಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿರುವ ಕೊಲಾಜೆನ್ ಮತ್ತು ಕ್ಯಾಲ್ಸಿಯಂ ಸಂಯುಕ್ತಗಳನ್ನು ಬಳಸಿಕೊಂಡು ವಿಜ್ಞಾನಿಗಳು ಚಿಕಿತ್ಸಕ ವಸ್ತುವನ್ನು ತಯಾರಿಸಿದ್ದಾರೆ.

ಮೀನಿನ ಹುರುಪೆಯಲ್ಲಿ “ಹೈಡ್ರಾಕ್ಸಿಅಪಟೈಟ್” ಎಂಬ ಅಂಶ ಸಮೃದ್ಧವಾಗಿದೆ. ಇದು ಮನುಷ್ಯನ ಹಲ್ಲಿನ ಎನಾಮಲ್ ಮತ್ತು ಮೂಳೆಯಲ್ಲಿರುವ ಅಂಶವನ್ನೇ ಹೋಲುತ್ತದೆ. ಸುಧಾರಿತ ತಂತ್ರಜ್ಞಾನದ ಮೂಲಕ ಇದನ್ನು ನ್ಯಾನೋ ಫೈಬರ್‌ಗಳಾಗಿ ಪರಿವರ್ತಿಸಲಾಗಿದ್ದು, ಇದು ಗಾಯಗೊಂಡ ಜಾಗದಲ್ಲಿ ಹೊಸ ಅಂಗಾಂಶಗಳು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಪಿ.ಕೆ. ಬಿನ್ಸಿ ಅವರ ನೇತೃತ್ವದಲ್ಲಿ, ಪತ್ತನಂತಿಟ್ಟದ ಕ್ಯಾಥೊಲಿಕೇಟ್ ಕಾಲೇಜು ಹಾಗೂ ಪುಷ್ಪಗಿರಿ ದಂತ ವೈದ್ಯಕೀಯ ಕಾಲೇಜಿನ ಸಂಶೋಧಕರು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ.