ನವದೆಹಲಿ: ಕಳೆದ ಹಲವು ವರ್ಷಗಳಿಂದ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಕುರಿತಾದ 200 ಕೋಟಿ ರೂಪಾಯಿಗಳ ಹಗರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈಗ ತಾವೇ ಸರ್ಕಾರಿ ಸಾಕ್ಷಿಯಾಗಿ ಸುಕೇಶ್ ವಿರುದ್ಧ ಸಾಕ್ಷ್ಯ ನೀಡಲು ಸಿದ್ಧ ಎಂದು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 17ರಂದು ನಡೆದ ವಿಚಾರಣೆ ವೇಳೆ ಜಾಕ್ವೆಲಿನ್ ಈ ಅಚ್ಚರಿಯ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕಾನೂನಿನ ಪ್ರಕಾರ, ಒಬ್ಬ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡು, ಪ್ರಕರಣದ ಉಳಿದ ಪ್ರಮುಖ ಆರೋಪಿಗಳ ವಿರುದ್ಧ ಪೂರಕ ಸಾಕ್ಷ್ಯ ಮತ್ತು ಮಾಹಿತಿ ನೀಡಲು ಒಪ್ಪಿದರೆ ಅವರನ್ನು ʻಅಪ್ರೂವರ್’ ಎನ್ನಲಾಗುತ್ತದೆ. ಪ್ರತಿಯಾಗಿ, ಕೋರ್ಟ್ ಆ ವ್ಯಕ್ತಿಗೆ ಶಿಕ್ಷೆಯಲ್ಲಿ ವಿನಾಯಿತಿ ನೀಡಬಹುದು ಅಥವಾ ಕ್ಷಮಾದಾನ ನೀಡಬಹುದು. ಜಾಕ್ವೆಲಿನ್ ಈಗ ಇದೇ ಹಾದಿ ಹಿಡಿದಿದ್ದು, ಜಾರಿ ನಿರ್ದೇಶನಾಲಯಕ್ಕೆ (ED) ಪೂರ್ಣ ಸಹಕಾರ ನೀಡಲು ಮುಂದಾಗಿದ್ದಾರೆ.

ಸುಕೇಶ್ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದ ಅವಧಿಯಲ್ಲೇ ಸರ್ಕಾರಿ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ರಾನ್‌ಬಾಕ್ಸಿ ಮಾಜಿ ಮಾಲೀಕ ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂ. ವಸೂಲಿ ಮಾಡಿದ್ದ ಎನ್ನಲಾಗಿದೆ. ಈ ಹಣದ ಒಂದು ಭಾಗವನ್ನು ಸುಕೇಶ್, ಜಾಕ್ವೆಲಿನ್ ಅವರಿಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡಲು ಬಳಸಿದ್ದ ಎಂದು ಇಡಿ ಆರೋಪಿಸಿತ್ತು. ಜಾಕ್ವೆಲಿನ್ ತಮಗೆ ಈ ಹಣದ ಮೂಲದ ಬಗ್ಗೆ ಗೊತ್ತಿರಲಿಲ್ಲ ಎಂದು ವಾದಿಸುತ್ತಲೇ ಬಂದಿದ್ದಾರೆ.

ನವೆಂಬರ್ 2022ರಲ್ಲಿ ಜಾಕ್ವೆಲಿನ್ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿತ್ತು. 2025ರ ಜುಲೈ – ಸೆಪ್ಟೆಂಬರ್ ನಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿ, ವಿಚಾರಣೆ ಎದುರಿಸುವಂತೆ ನಟಿಗೆ ಸೂಚಿಸಿದ್ದವು. 2026ರ ಏಪ್ರಿಲ್ 17ರಲ್ಲಿ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಹಾಜರಾದ ಜಾಕ್ವೆಲಿನ್, ತಾನು ಸಾಕ್ಷಿಯಾಗಲು ಸಿದ್ಧ ಎಂದು ತಿಳಿಸಿದರು.

ಮುಂದಿನ ಹಂತವೇನು?
ಜಾಕ್ವೆಲಿನ್ ಅವರ ಮೌಖಿಕ ವಿನಂತಿಯನ್ನು ಆಲಿಸಿದ ಕೋರ್ಟ್, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಅಧಿಕೃತವಾಗಿ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಜಾಕ್ವೆಲಿನ್ ನೀಡುವ ಮಾಹಿತಿ ಎಷ್ಟು ಸತ್ಯ ಮತ್ತು ಪ್ರಕರಣಕ್ಕೆ ಎಷ್ಟು ಸಹಕಾರಿ ಎಂಬುದನ್ನು ಪರಿಶೀಲಿಸಿದ ನಂತರವಷ್ಟೇ ಕೋರ್ಟ್ ಅವರಿಗೆ ಅಪ್ರೂವರ್ ಸ್ಥಾನಮಾನ ನೀಡಲಿದೆ. ಒಂದು ವೇಳೆ ಅವರು ಸುಳ್ಳು ಮಾಹಿತಿ ನೀಡಿದರೆ, ಈ ವಿನಾಯಿತಿಯನ್ನು ರದ್ದುಗೊಳಿಸಿ ಮತ್ತೆ ಶಿಕ್ಷೆ ವಿಧಿಸುವ ಅವಕಾಶವೂ ಇರುತ್ತದೆ.

ಒಟ್ಟಾರೆಯಾಗಿ, ಈ ಬೆಳವಣಿಗೆಯಿಂದ ಸುಕೇಶ್ ಚಂದ್ರಶೇಖರ್ ಮತ್ತು ಆತನ ಆಪ್ತೆ ಪಿಂಕಿ ಇರಾನಿ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.