ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ನವ ವರ ಸೇರಿ ಇಬ್ಬರ ಬಂಧನ

ಬೆಳ್ತಂಗಡಿ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವನಿಗೆ ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ.

ಆರೋಪಿಗಳ ವಿವರ:
ಬಂಧಿತರನ್ನು ಕಡುರುದ್ಯಾವರ ಗ್ರಾಮದ ಸುಮಂತ್ (28) ಮತ್ತು ಗರ್ಡಾಡಿ ಗ್ರಾಮದ ನವನೀತ್ (26) ಎಂದು ಗುರುತಿಸಲಾಗಿದೆ. ಇವರನ್ನು ಏಪ್ರಿಲ್ 18 ರಂದು ಸಂಜೆ ವಶಕ್ಕೆ ಪಡೆಯಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಆರೋಪಿಗಳು ಏಪ್ರಿಲ್ 16 ರಂದು ಪುಸಲಾಯಿಸಿ ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು ಬಾಲಕಿಯು ನೀಡಿದ ಮಾಹಿತಿಯ ಮೇರೆಗೆ ಪೋಷಕರು ಏಪ್ರಿಲ್ 17 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೋಕ್ಸೊ ಪ್ರಕರಣ ದಾಖಲು:
ದೂರಿನ ಅನ್ವಯ ಪೊಲೀಸರು ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದ ಧರ್ಮಸ್ಥಳ ಉಪನಿರೀಕ್ಷಕ ಸಮರ್ಥ ಆರ್. ಗಾಣಿಗೇರ ಹಾಗೂ ತಂಡವು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಮದುವೆ ನಿಗದಿಯಾಗಿದ್ದ ಆರೋಪಿ:
ಬಂಧಿತ ಆರೋಪಿಗಳ ಪೈಕಿ ಸುಮಂತ್‌ಗೆ ಮೇ 10 ರಂದು ಮದುವೆ ನಿಗದಿಯಾಗಿತ್ತು ಎಂದು ತಿಳಿದುಬಂದಿದೆ. ಮದುವೆಯ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ ಆರೋಪಿಯು ಜೈಲು ಪಾಲಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!