ಬೆಚ್ಚಿಬೀಳಿಸುವ ಸುದ್ದಿ!!! ಸದ್ಯದಲ್ಲೇ UFO ರಹಸ್ಯ ದಾಖಲೆಗಳ ಬಿಡುಗಡೆ; ಡೊನಾಲ್ಡ್‌ ಟ್ರಂಪ್‌ ಮಹತ್ವದ ಘೋಷಣೆ

ವಾಷಿಂಗ್ಟನ್: ಏಲಿಯನ್‌ಗಳು ಅಥವಾ ಹಾರುವ ತಟ್ಟೆಗಳು ಕೇವಲ ಸಿನಿಮಾದ ಕಲ್ಪನೆಯೇ ಅಥವಾ ನಿಜವಾಗಿಯೂ ಅಸ್ತಿತ್ವದಲ್ಲಿವೆಯೇ? ಈ ದಶಕಗಳ ಕಾಲದ ಪ್ರಶ್ನೆಗೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ನೀಡಲು ಮುಂದಾಗಿದ್ದಾರೆ. ಫೀನಿಕ್ಸ್‌ನಲ್ಲಿ ನಡೆದ ʻಟರ್ನಿಂಗ್ ಪಾಯಿಂಟ್ ಯುಎಸ್‌ಎ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, UFO (unidentified flying object) ಗಳಿಗೆ ಸಂಬಂಧಿಸಿದ ಅತ್ಯಂತ ಆಸಕ್ತಿದಾಯಕ ದಾಖಲೆಗಳನ್ನು ಅಮೆರಿಕದ ರಕ್ಷಣಾ ಇಲಾಖೆ (Pentagon) “ಬಹಳ ಬೇಗ” ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ.

“ಯುಎಫ್‌ಒ ಮತ್ತು ವಿವರಿಸಲಾಗದ ಆಕಾಶ ವಿದ್ಯಮಾನಗಳಿಗೆ (UAP) ಸಂಬಂಧಿಸಿದ ಸರ್ಕಾರಿ ಫೈಲ್‌ಗಳನ್ನು ಬಿಡುಗಡೆ ಮಾಡುವಂತೆ ನಾನು ರಕ್ಷಣಾ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಈ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ನಾವು ಹಲವು ರೋಚಕ ದಾಖಲೆಗಳನ್ನು ಪತ್ತೆಹಚ್ಚಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ. ಫೆಬ್ರವರಿಯಲ್ಲಿ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರಿಗೆ ಈ ಕುರಿತು ಪರಿಶೀಲನೆ ನಡೆಸಲು ಆದೇಶಿಸಿದ್ದರು. ಆದರೆ, ಈ ವಿದ್ಯಮಾನಗಳು ಖಂಡಿತವಾಗಿಯೂ ಏಲಿಯನ್‌ಗಳಿಗೆ ಸಂಬಂಧಪಟ್ಟವು ಎಂದು ಟ್ರಂಪ್ ಎಲ್ಲೂ ಖಚಿತಪಡಿಸಿಲ್ಲ ಎಂಬುದು ಗಮನಾರ್ಹ.

ಅಮೆರಿಕದ ಸಂಸತ್ತಿನಲ್ಲಿ (Capitol Hill) ಈ ವಿಷಯವಾಗಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಫ್ಲೋರಿಡಾದ ಪ್ರತಿನಿಧಿ ಅಣ್ಣಾ ಪೌಲಿನಾ ಲೂನಾ ಅವರು, ಪೆಂಟಗನ್ ಬಳಿ ಇರುವ UFO ತನಿಖೆಗೆ ಸಂಬಂಧಿಸಿದ 46 ವಿಡಿಯೋಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪತ್ರ ಬರೆದಿದ್ದಾರೆ. ಏಪ್ರಿಲ್ 14ರ ಗಡುವು ಮೀರಿದರೂ ದಾಖಲೆ ಸಿಗದ ಕಾರಣ, ಅವರು ಸಮನ್ಸ್ (Subpoena) ನೀಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. “ಈ ನಿಗೂಢ ವಿದ್ಯಮಾನಗಳು ದೇಶದ ರಾಷ್ಟ್ರೀಯ ಭದ್ರತೆಗೆ ಮತ್ತು ಮಿಲಿಟರಿ ನೆಲೆಗಳಿಗೆ ಬೆದರಿಕೆಯಾಗುವ ಸಾಧ್ಯತೆ ಇದೆ” ಎಂದು ಲೂನಾ ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಪಾಡ್‌ಕಾಸ್ಟ್ ಒಂದರಲ್ಲಿ “ಏಲಿಯನ್‌ಗಳು ನಿಜವಿರಬಹುದು” ಎಂದು ಹೇಳಿ ಆನಂತರ “ವಿಶ್ವದ ಯಾವುದೋ ಮೂಲೆಯಲ್ಲಿ ಜೀವ ಇರಬಹುದು ಎಂದಷ್ಟೇ ನನ್ನ ಅರ್ಥ” ಎಂದು ಸ್ಪಷ್ಟನೆ ನೀಡಿದ್ದರು. ಇತ್ತ ಪೆಂಟಗನ್ ಕಳೆದ ವರ್ಷ ನೂರಾರು UFO ವರದಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 21 ವರದಿಗಳು “ಅಸಹಜ ಗುಣಲಕ್ಷಣ” ಹೊಂದಿರುವುದರಿಂದ ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆದರೂ, ಇದುವರೆಗೆ ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಖಚಿತ ಪುರಾವೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ವಾದಿಸುತ್ತಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರ ಈ ಘೋಷಣೆಯಿಂದಾಗಿ ಸದ್ಯದಲ್ಲೇ ಅಮೆರಿಕದ ರಹಸ್ಯ ಭಂಡಾರದಿಂದ UFOಗಳಿಗೆ ಸಂಬಂಧಿಸಿದ ವಿಡಿಯೋಗಳು ಅಥವಾ ಫೈಲ್‌ಗಳು ಹೊರಬೀಳಲಿವೆ. ಇದು ಜಗತ್ತಿನ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

error: Content is protected !!