ಕೊಲೆಗೈದು ಅಪಘಾತ ನಾಟಕವಾಡಿದ್ದ ಖದೀಮರು ಬಲೆಗೆ- ರಮೇಶ್ ಹಾನಾಪುರ ತಂಡದ ಭರ್ಜರಿ ಕಾರ್ಯಾಚರಣೆ

ಯಲ್ಲಾಪುರ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದು, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವಿದ್ದ ಕಾರನ್ನು ಸುಟ್ಟು ಹಾಕಿ, ಅದನ್ನೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಭೀಕರ ಪ್ರಕರಣವನ್ನು ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ ನೇತೃತ್ವದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ನಿತೀಶ್ ದಾಪಲೆ
ನಿತೀಶ್ ದಾಪಲೆ

ಬೆಳಗಾವಿಯ ಚಂದ್ರಮೌಳಿ ಕಾಲೋನಿಯ ನಿವಾಸಿ ನಿತೀಶ್ ದಾಪಲೆ (35) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿಯ ಅಬ್ದುಲ್ ನಹೀಮ್ (32), ಮೌಲಾಸಾಬ್ (36) ಹಾಗೂ ದಾದಾಪೀರ್ ಅಪ್ತಾಬ್ (22) ಎಂಬುವವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಏಪ್ರಿಲ್ 8 ರಂದು ಮುಂಜಾನೆ ಯಲ್ಲಾಪುರದ ತಾಳೆಕುಂಬ್ರಿ ಬಸ್ ನಿಲ್ದಾಣದ ಬಳಿ ಕಾರೊಂದು ರಸ್ತೆಯ ತಗ್ಗಿನಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕಾರಿನೊಳಗೆ ವ್ಯಕ್ತಿಯೊಬ್ಬರ ಶವ ಕೂಡ ಸುಟ್ಟ ಸ್ಥಿತಿಯಲ್ಲಿತ್ತು. ಮೇಲ್ನೋಟಕ್ಕೆ ಇದು ಅತಿವೇಗದಿಂದ ನಡೆದ ಅಪಘಾತ ಎಂದು ಕಂಡುಬಂದಿದ್ದರಿಂದ, ಮೃತರ ತಂದೆ ಜಗನ್ನಾಥ್ ರಾಹು ಧಾಪಳೆ ಅವರು ನೀಡಿದ ದೂರಿನ ಮೇರೆಗೆ ಆರಂಭದಲ್ಲಿ ಅಪಘಾತದ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಂದೆ ಜಗನ್ನಾಥ್ ಅವರು, ಇದೊಂದು ಯೋಜಿತ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್. ಅವರು ತನಿಖೆಗೆ ಸೂಚಿಸಿದರು. ಯಲ್ಲಾಪುರ ಸಿಪಿಐ ರಮೇಶ್ ಹನಾಪೂರ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಕೈಗೆತ್ತಿಕೊಳ್ಳಲಾಯಿತು.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿದಾಗ, ಇದೊಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಹತ್ಯೆ ಎಂಬುದು ದೃಢಪಟ್ಟಿತು. ಆರೋಪಿಗಳು ನಿತೀಶ್‌ನನ್ನು ಹತ್ಯೆ ಮಾಡಿ, ನಂತರ ಆತನನ್ನೇ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಅಪಘಾತದ ನಾಟಕವಾಡಿದ್ದರು. ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮತ್ತೊಂದು ಬಲೆನೊ ಕಾರು ಹಾಗೂ ಎರಡು ಸ್ಕೂಟರ್‌ಗಳನ್ನು ಜಪ್ತಿ ಮಾಡಿದೆ.

ಸವಾಲಾಗಿದ್ದ ಈ ಪ್ರಕರಣವನ್ನು ಅತಿ ಶೀಘ್ರವಾಗಿ ಭೇದಿಸಿದ ಸಿಪಿಐ ರಮೇಶ್ ಹನಾಪೂರ್, ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಅವರ ತಂಡದ ಕಾರ್ಯಕ್ಷಮತೆಯನ್ನು ಇಲಾಖೆಯ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ.

error: Content is protected !!