ದಕ್ಷಿಣ ಕನ್ನಡ ಜಿಲ್ಲಾ ಮಿತ್ತಬೈಲ್ ಸೆಂಟ್ರಲ್ ಮುಸ್ಲಿಂ ಜಮಾತ್ ಒಕ್ಕೂಟ ಅಸ್ತಿತ್ವಕ್ಕೆ

ಮಿತ್ತಬೈಲ್ ಅನ್ನು ಕೇಂದ್ರವಾಗಿರಿಸಿಕೊಂಡು ಬಂಟ್ವಾಳ ತಾಲೂಕು ಹಾಗೂ ಆಸುಪಾಸಿನ ವಿವಿಧ ಮಸೀದಿಗಳ ಜಮಾತ್ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಮಿತ್ತಬೈಲ್ ಸಮುದಾಯ ಭವನದಲ್ಲಿ ಮಿತ್ತಬೈಲ್ ಜಮಾತ್ ಅಧ್ಯಕ್ಷರಾದ ಮುಹಮ್ಮದ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಬಂಟ್ವಾಳ ತಾಲೂಕು ಹಾಗೂ ಆಸುಪಾಸಿನ ಮಸೀದಿಗಳ ನಡುವೆ ಪರಸ್ಪರ ಸಮನ್ವಯ, ಸಹಕಾರ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಬಲಿಷ್ಠ ಒಕ್ಕೂಟದ ಅಗತ್ಯವಿರುವ ಕುರಿತು ವಿವರಿಸಲಾಯಿತು. ಶಿಕ್ಷಣ, ಮದರಸ ಅಭಿವೃದ್ಧಿ, ಉಸ್ತಾದರ ಕಲ್ಯಾಣ, ಬಡವರು ಹಾಗೂ ನಿರ್ಗತಿಕರ ನೆರವು, ಯುವಜನರ ಸಬಲೀಕರಣ, ಸಾಮಾಜಿಕ ಸಮಸ್ಯೆಗಳ ಪರಿಹಾರ, ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವುದು ಹಾಗೂ ಸಮುದಾಯದ ಪರವಾಗಿ ಒಗ್ಗಟ್ಟಿನ ಧ್ವನಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಈ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಲಾಯಿತು.

ಸಭೆಯು ಮುಹಿಯುದ್ದಿನ್ ಜುಮಾ ಮಸೀದಿ ಮಿತ್ತಬೈಲ್ ಮುದರ್ರಿಸ್ ಬಹು ಉಮರುಲ್ ಫಾರೂಕ್ ಫೈಝಿ ಅವರ ದುವಾದೊಂದಿಗೆ ಆರಂಭಗೊಂಡಿದ್ದು, ಮುಹಿಯುದ್ದಿನ್ ಜುಮಾ ಮಸೀದಿ ಮಿತ್ತಬೈಲ್ ಖತೀಬ್ ಉಸ್ತಾದ್ ಬಹು ಅಬ್ದುಲ್ ರಝಕ್ ನಿಜಾಮಿ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಬಂಬ್ರಾಣ ಉಸ್ತಾದ್ ಅವರು ದಕ್ಷಿಣ ಕನ್ನಡ ಜಿಲ್ಲಾ ಮಿತ್ತಬೈಲ್ ಸೆಂಟ್ರಲ್ ಮುಸ್ಲಿಂ ಜಮಾತ್ ಒಕ್ಕೂಟದ ರಚನೆಯ ರೂಪುರೇಷೆ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ಮಿತ್ತಬೈಲ್ ಜಮಾತ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಸಭೆಯ ವಿಷಯ ಮಂಡನೆ ಮಾಡಿದರು. ಮಾಜಿ ಅಧ್ಯಕ್ಷ ಮುಹಮ್ಮದ್ ಅದ್ದೇಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಮಿತ್ತಬೈಲ್ ಅನ್ನು ಕೇಂದ್ರವಾಗಿರಿಸಿಕೊಂಡು “ದಕ್ಷಿಣ ಕನ್ನಡ ಜಿಲ್ಲಾ ಮಿತ್ತಬೈಲ್ ಸೆಂಟ್ರಲ್ ಮುಸ್ಲಿಂ ಜಮಾತ್ ಒಕ್ಕೂಟ” ರಚಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಒಕ್ಕೂಟದ ಮುಂದಿನ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ಕುರಿತು ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಯಿತು.

ಖಾಝಿ ವಿಚಾರದ ಕುರಿತು ನಡೆದ ಚರ್ಚೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಜಮಾತ್ ಮಿತ್ತಬೈಲ್ ಖಾಝಿಯನ್ನು ಸ್ವೀಕರಿಸುವುದಾದರೆ, ಸಂಬಂಧಿತ ಜಮಾತ್ ಸಮಿತಿಯು ಮಸೀದಿಯಲ್ಲಿ ಅಂಗೀಕರಿಸಿದ ನಿರ್ಣಯದ ಪ್ರತಿಯನ್ನು ಜುಲೈ 31ರೊಳಗೆ ಮಿತ್ತಬೈಲ್ ಜಮಾತ್‌ಗೆ ಸಲ್ಲಿಸಬೇಕು.

ಬಳಿಕ ಈ ಕುರಿತು ಮಿತ್ತಬೈಲ್ ಖಾಝಿ ಅವರೊಂದಿಗೆ ಸಮಾಲೋಚನೆ ನಡೆಸುವುದೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಆಹ್ವಾನ ನೀಡಲಾಗಿದ್ದ ಬಹುತೇಕ ಜಮಾತ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿ, ಒಕ್ಕೂಟದ ರಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಜಮಾತ್ ಸಮಿತಿ ಸದಸ್ಯ ಎಸ್. ಪಿ. ಶಾಹುಲ್ ಹಮೀದ್ ಸ್ವಾಗತಿಸಿದರು. ಉಪಾಧ್ಯಕ್ಷ ಇಕ್ಬಾಲ್ ನಂದರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

error: Content is protected !!