ಮಂಗಳೂರು: “ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಭಾಷಣ ಮಾಡುವ ಕಾಂಗ್ರೆಸ್ ನಾಯಕರು, ಮೊದಲು ತಾವೇ ಅದನ್ನು ಪಾಲಿಸುತ್ತಿದ್ದಾರೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ.”
ಹೀಗೆಂದು ಗುಡುಗಿದ್ದು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್. ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಪ್ರದರ್ಶಿಸುತ್ತಾ, ಕಾಂಗ್ರೆಸ್ ಸರ್ಕಾರದ ಅನುದಾನದ ನಾಟಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಹಣಕಾಸು ಇಲಾಖೆಯ ಅನುಮೋದನೆ ಇಲ್ಲದೆಯೇ ಶಿಲಾನ್ಯಾಸ ಮಾಡಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಶಾಸಕರು, “ಹಿಂದಿನ ಸರ್ಕಾರದ ಬಜೆಟ್ ಪುಟಗಳನ್ನು ಒಮ್ಮೆ ತಿರುವಿ ಹಾಕಿ ನೋಡಿ. ಬಜೆಟ್‌ನಲ್ಲಿ ಘೋಷಣೆಯಾಗುವುದು ಹಣಕಾಸು ಇಲಾಖೆಯ ಅನುಮತಿಯ ನಂತರವೇ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಇವರು, ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸೀಮರು,” ಎಂದು ಆಕ್ರೋಶ ಹೊರಹಾಕಿದರು.
“ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ದಿನ 70ಕ್ಕೂ ಹೆಚ್ಚು ಗುದ್ದಲಿ ಪೂಜೆ ಮಾಡಿದ ದಾಖಲೆ ಇದೆ. ಆದರೆ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಗುದ್ದಲಿ ಪೂಜೆ ನಡೆಸಲು ಇವರಿಗೆ ಸಾಧ್ಯವಾಗಿಲ್ಲ. ಬಿಜೆಪಿ ಅವಧಿಯಲ್ಲಿ ಮಂಜೂರಾದ ಅನುದಾನಗಳಿಗೆ ತಡೆ ನೀಡಿ ಈಗ ಸತತ ಪ್ರಯತ್ನದ ಬಳಿಕ ಬಿಡುಗಡೆಯಾದ ಕೆಲಸಗಳನ್ನೇ ತಮ್ಮ ಸಾಧನೆ ಎನ್ನುತ್ತಿರುವುದು ಹಾಸ್ಯಾಸ್ಪದ. ರಾಜಕಾಲುವೆ ಹೂಳೆತ್ತುವ ಕೆಲಸ ಪ್ರತಿ ವರ್ಷ ನಡೆಯುವಂತದ್ದು, ಅದು ಜನರ ತೆರಿಗೆ ಹಣ. ಅದಕ್ಕೂ ಕೈ ಹಾಕುತ್ತಿರುವುದು ಇವರ ಹತಾಶೆಯನ್ನು ತೋರಿಸುತ್ತದೆ,” ಎಂದು ಲೇವಡಿ ಮಾಡಿದರು.

ನಗರದಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ, ಜಲಸಿರಿ ಹಾಗೂ ಒಳಚರಂಡಿ ಕಾಮಗಾರಿಗಳ ಬಗ್ಗೆ ಮಾತನಾಡಿದ ಕಾಮತ್, ಇವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳೆಂದು ಸ್ಪಷ್ಟಪಡಿಸಿದರು. “ಕೇಂದ್ರ ನೀಡಿದ ಅನುದಾನವನ್ನು ಸರಿಯಾಗಿ ಬಳಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಒಂದು ರೂಪಾಯಿ ಕೊಟ್ಟಿದ್ದರೂ ದಾಖಲೆ ನೀಡಲಿ,” ಎಂದು ಸವಾಲು ಹಾಕಿದರು. ಕರಾವಳಿ ಭಾಗಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಏನೂ ಸಿಗದಿರುವುದು ಕಾಂಗ್ರೆಸ್ ನಾಯಕರಿಗೆ ಕಾಣುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.
