ಮಂಗಳೂರು: ನಮ್ಮ ಮಣ್ಣಿನ ಸೊಗಡು, ಕರಾವಳಿಯ ಆಚಾರ-ವಿಚಾರಗಳು ಕೇವಲ ಜಿಲ್ಲೆಗೆ ಸೀಮಿತವಾಗಬಾರದು, ಅದು ರಾಜಧಾನಿಯ ಜನರಿಗೂ ತಲುಪಬೇಕು ಎಂಬ ಉದ್ದೇಶದೊಂದಿಗೆ ಕರ್ನಾಟಕ ಜಾನಪದ ಪರಿಷತ್ತು ದ.ಕ. ಮತ್ತು ವೈಟ್ ಲೋಟಸ್ ಫೌಂಡೇಶನ್ ಭರ್ಜರಿ ಯೋಜನೆಯೊಂದನ್ನು ರೂಪಿಸಿವೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್‌ಬೈಲ್ ಈ ಕುರಿತು ಮಾಹಿತಿ ನೀಡಿ, ಬರುವ ಏಪ್ರಿಲ್ 24 ರಿಂದ ಏಪ್ರಿಲ್ 26ರ ವರೆಗೆ ಬೆಂಗಳೂರಿನ ಬಸವೇಶ್ವರ ನಗರದ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ‘ಕರಾವಳಿ ಜಾನಪದ ವೈಭವ’ ಕಾರ್ಯಕ್ರಮ ಅನಾವರಣಗೊಳ್ಳಲಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಸಹಯೋಗದೊಂದಿಗೆ ನಡೆಯಲಿರುವ ಈ ಉತ್ಸವದಲ್ಲಿ ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಜಾನಪದ ಕ್ರೀಡೆಗಳ ದೊಡ್ಡ ಮೆರವಣಿಗೆಯೇ ನಡೆಯಲಿದೆ ಎಂದರು.

ಈ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ತುಳುನಾಡಿನ ಪವಿತ್ರ ಆರಾಧನೆಗಳು, ಹುಲಿ ಕುಣಿತದ ಅಬ್ಬರ, ಯಕ್ಷಗಾನದ ಗತ್ತು ಹಾಗೂ ಸಾಂಪ್ರದಾಯಿಕ ಆಹಾರ ಮೇಳಗಳು ಜನರನ್ನು ಸೆಳೆಯಲಿವೆ. ಕೇವಲ ಮನೋರಂಜನೆಯಷ್ಟೇ ಅಲ್ಲದೆ, ಕರಾವಳಿಯ ಗ್ರಾಮೀಣ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ವಿಚಾರ ಸಂಕಿರಣಗಳ ಮೂಲಕ ಹೊಸ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಮಹತ್ಕಾರ್ಯಕ್ಕೆ ಈ ವೇದಿಕೆ ಸಾಕ್ಷಿಯಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೈಟ್ ಲೋಟಸ್ ಫೌಂಡೇಶನ್ ಅಧ್ಯಕ್ಷೆ ಪ್ರಮೀಳಾ ಸಾಯಿ ಪ್ರಿಯ, ಕಾನೂನು ಸಲಹೆಗಾರರಾದ ವಕೀಲ ಸಂದೀಪ್ ಶೆಟ್ಟಿ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್ ಹಾಗೂ ಧಾರ್ಮಿಕ ಚಿಂತಕರಾದ ಪ್ರವೀಣ್ ಕಂದಾವರ ಉಪಸ್ಥಿತರಿದ್ದರು.
