ಟಿಸಿಎಸ್ ಅಂಗಳದಲ್ಲಿ ಮತಾಂತರದ ಮಾಯಾಜಾಲ: ಗರ್ಭಿಣಿ ನಿದಾ ಖಾನ್‌ಗೆ ಈಗ ಕಾನೂನು ಸಂಕಷ್ಟ!

ನಾಸಿಕ್/ಮುಂಬೈ: ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರದ ಕರಾಳ ಕಥೆ ಈಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದ ಪ್ರಮುಖ ಸೂತ್ರಧಾರಿ ಎನ್ನಲಾದ ನಿದಾ ಖಾನ್ ಕೈಗೆ ಕಂಪೆನಿಯು ಅಮಾನತು ಪತ್ರವನ್ನಿಟ್ಟು ಹೊರದಬ್ಬಿದೆ. 2021ರಲ್ಲಿ ಪ್ರೊಸೆಸ್ ಅಸೋಸಿಯೇಟ್ ಆಗಿ ಸೇರಿದ ನಿದಾ, ಕಂಪನಿಯ ನೆಟ್‌ವರ್ಕ್ ಬಳಸದಂತೆ ನಿರ್ಬಂಧ ಹೇರಲಾಗಿದ್ದು, ಆಕೆಯ ಅಧಿಕಾರವನ್ನೆಲ್ಲ ಕಿತ್ತುಕೊಳ್ಳಲಾಗಿದೆ.

ಈ ಇಡೀ ಹಗರಣ ಬಯಲಿಗೆ ಬಂದಿದ್ದು ದಾನಿಶ್ ಶೇಖ್ ಎಂಬಾತನ ಕೃತ್ಯದಿಂದ. ಮದುವೆಯಾಗುವುದಾಗಿ ನಂಬಿಸಿ ಸಹೋದ್ಯೋಗಿಯೊಬ್ಬರನ್ನು ದೈಹಿಕವಾಗಿ ಬಳಸಿಕೊಂಡಿದ್ದ ದಾನಿಶ್, ತಾನು ಮೊದಲೇ ಮದುವೆಯಾದವನು ಎಂಬ ಸತ್ಯವನ್ನು ಮರೆಮಾಚಿದ್ದ. ಈತನಿಗೆ ಸಾಥ್ ನೀಡಿದ್ದು ಆತನ ತಂಗಿ ಇದೇ ನಿದಾ ಖಾನ್. ಸಂತ್ರಸ್ತೆಯ ಧರ್ಮದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಲ್ಲದೆ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ನಿದಾ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಎಫ್‌ಐಆರ್‌ನಲ್ಲಿದೆ.

ಪೊಲೀಸರು ಈ ಪ್ರಕರಣದ ಬೆನ್ನತ್ತುತ್ತಿದ್ದಂತೆ ಕಂಪೆನಿಯ ಒಳಗಿದ್ದ ಅಸಲಿ ಮುಖವಾಡಗಳು ಕಳಚಿ ಬೀಳುತ್ತಿವೆ. ಹಿರಿಯ ಅಧಿಕಾರಿಗಳಿಂದ ಲೈಂಗಿಕ ಕಿರುಕುಳ ಅನುಭವಿಸಿದ ಇನ್ನೂ ಏಳು ಮಹಿಳೆಯರು ಧೈರ್ಯ ಮಾಡಿ ದೂರು ನೀಡಿದ್ದಾರೆ. ಎಚ್‌ಆರ್ ವಿಭಾಗಕ್ಕೆ ಈ ಮೊದಲೇ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ಇಲ್ಲಿನ ಆತಂಕಕಾರಿ ಸಂಗತಿ. ಸದ್ಯ ಪೊಲೀಸರು ಒಬ್ಬ ಮಹಿಳಾ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಏಳು ಜನರನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಇಷ್ಟು ದಿನ ತಲೆಮರೆಸಿಕೊಂಡಿದ್ದ ನಿದಾ ಖಾನ್ ಈಗ ಮುಂಬೈನಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಾನು ಗರ್ಭಿಣಿ ಎಂಬ ಕಾರಣ ನೀಡಿ ನಾಸಿಕ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. “ನನ್ನ ಮೇಲೆ ಯಾವುದೇ ನೇರ ಆರೋಪಗಳಿಲ್ಲ, ನಾನು ಕೇವಲ ಮಾತುಕತೆ ನಡೆಸಿದ್ದೇನೆ” ಎಂದು ನಿದಾ ವಕೀಲರ ಮೂಲಕ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಇತ್ತ ರಾಜ್ಯ ಸರ್ಕಾರ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ಹಿಂದೆ ದೊಡ್ಡ ಜಾಲವೇ ಇದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದೆ.

ಇಡೀ ದೇಶಾದ್ಯಂತ ಚರ್ಚೆಯಾಗುತ್ತಿರುವ ಈ ವಿದ್ಯಮಾನದಿಂದ ಕಂಪನಿಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಿರುಕುಳದ ವಿಷಯದಲ್ಲಿ ತಾನು ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸುವುದಾಗಿ ತಿಳಿಸಿರುವ ಟಿಸಿಎಸ್ ಆಡಳಿತ ಮಂಡಳಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದೆ. ನಾಸಿಕ್ ಘಟಕದಲ್ಲಿ ಕೆಲಸ ಮಾಡುವ ನೂರಾರು ಉದ್ಯೋಗಿಗಳು ಈಗ ಆತಂಕದಲ್ಲಿದ್ದು, ಆಂತರಿಕ ತನಿಖೆಯೂ ಚುರುಕಾಗಿದೆ.

error: Content is protected !!