ಮಂಜೇಶ್ವರ: ಸಮುದ್ರದ ಬಳಿ ಆಟವಾಡುತ್ತಿದ್ದ ಆಟಿಸಂ ಪೀಡಿತ ಯುವಕ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆ

ಕಾಸರಗೋಡು: ವಿಷು ಹಬ್ಬದ ಸಂಭ್ರಮದ ನಡುವೆಯೇ ಮಂಜೇಶ್ವರದ ಕಂಡುಕ್ಕೊಳಕೆ ಬೀಚ್‌ನಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದ ಆಟಿಸಂ (Autism) ಪೀಡಿತ 18 ವರ್ಷದ ಯುವಕನೊಬ್ಬ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ನಡೆದಿದೆ.

ಮಂಜೇಶ್ವರದ ಚೌಕಿ ನಿವಾಸಿ, ಇಸ್ಲಾಮಿಕ್ ವಿದ್ವಾಂಸ ಹಾಗೂ ಸಮಸ್ತ ನಾಯಕ ಉಮರುಲ್ ಫಾರೂಕ್ ಮತ್ತು ರಸೀನಾ ದಂಪತಿಯ ಎರಡನೇ ಪುತ್ರ ಮೊಹಮ್ಮದ್ ಜೈನುಲ್ ಅಬಿದ್ (18) ನಾಪತ್ತೆಯಾದ ಯುವಕ. ಬುಧವಾರ ಸಂಜೆ ಕುಟುಂಬದವರು ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದರು. ಮೊದಲು ಆಟೋರಿಕ್ಷಾದಲ್ಲಿ ಬಂದಿದ್ದ ಅಬಿದ್, ಆತನ ಅಕ್ಕ ಮತ್ತು ತಮ್ಮ ನೀರಿನ ಬಳಿ ಆಟವಾಡುತ್ತಿದ್ದರು. ಆಟೋರಿಕ್ಷಾವು ಪೋಷಕರನ್ನು ಕರೆತರಲು ವಾಪಸ್ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಬಿದ್ ಆಟಿಸಂನಿಂದ ಬಳಲುತ್ತಿದ್ದ ಕಾರಣ, ಅಕ್ಕ ಮತ್ತು ತಮ್ಮ ಆತನ ಕೈ ಹಿಡಿದುಕೊಂಡೇ ಆಟವಾಡುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರ ಕೈ ಬಿಡಿಸಿಕೊಂಡ ಅಬಿದ್ ನೀರಿನತ್ತ ಓಡಿದ್ದಾನೆ. ಅದೇ ಕ್ಷಣದಲ್ಲಿ ಅಪ್ಪಳಿಸಿದ ಪ್ರಚಂಡ ಅಲೆಯು ಆತನನ್ನು ಸಮುದ್ರದ ಒಳಕ್ಕೆ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

napatte

ಬೀಚ್‌ನಲ್ಲಿದ್ದ ಕಡಂಬಾರ್ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬುವವರು ಮಕ್ಕಳ ಕಿರುಚಾಟ ಕೇಳಿ ತಕ್ಷಣವೇ ಸಮುದ್ರಕ್ಕೆ ಜಿಗಿದಿದ್ದಾರೆ. “ನಾನು ಮತ್ತು ನನ್ನ ಸ್ನೇಹಿತರು ಸುಮಾರು 200 ಮೀಟರ್ ದೂರದಲ್ಲಿದ್ದೆವು. ಯಾರೋ ನೀರಿನಲ್ಲಿ ಕೈ ಆಡಿಸುತ್ತಾ ಕೂಗುತ್ತಿರುವುದನ್ನು ಕಂಡು ಓಡಿ ಹೋದೆವು. ನಾನು ಅಬಿದ್‌ನ ಅಕ್ಕ ಮತ್ತು ತಮ್ಮನನ್ನು ಸುರಕ್ಷಿತವಾಗಿ ದಡಕ್ಕೆ ತಂದೆ. ಅಬಿದ್‌ನನ್ನು ಕೂಡ ಹಿಡಿದಿದ್ದೆ, ಆದರೆ ಅಷ್ಟರಲ್ಲೇ ಅಪ್ಪಳಿಸಿದ ಮತ್ತೊಂದು ಬಲವಾದ ಅಲೆ ನಮ್ಮನ್ನು ಬೇರ್ಪಡಿಸಿತು. ಆ ಬಳಿಕ ಆತ ಸಮುದ್ರದ ಅಲೆಗಳ ನಡುವೆ ಮರೆಯಾದ” ಎಂದು ಸಿದ್ದಿಕ್ ನೋವಿನಿಂದ ಘಟನೆಯನ್ನು ವಿವರಿಸಿದ್ದಾರೆ.

ಸಂಜೆ 5:27ಕ್ಕೆ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದ್ದು, ಸ್ಟೇಷನ್ ಆಫೀಸರ್ ರಾಜೇಶ್ ಕುಮಾರ್ ನೇತೃತ್ವದಲ್ಲಿ ಶೋಧ ಕಾರ್ಯ ಆರಂಭವಾಯಿತು. ರಾತ್ರಿ 8 ಗಂಟೆಯವರೆಗೂ ನಡೆದ ಕಾರ್ಯಾಚರಣೆ ಬಳಿಕ, ರಾತ್ರಿ 1:30ರ ವರೆಗೂ ಲೈಟ್‌ಗಳ ಸಹಾಯದಿಂದ ಶೋಧ ಮುಂದುವರಿಸಲಾಗಿತ್ತು. ಸ್ಥಳೀಯ ಮೀನುಗಾರರು ಕೂಡ ತಮ್ಮ ದೋಣಿಗಳ ಮೂಲಕ ಸಮುದ್ರಕ್ಕಿಳಿದು ಹುಡುಕಾಟ ನಡೆಸಿದ್ದಾರೆ.

error: Content is protected !!