ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸಾವು

ಕುಂದಾಪುರ: ಕೊಲ್ಲೂರು-ಕುಂದಾಪುರ ಮುಖ್ಯ ರಸ್ತೆಯ ವಂಡ್ಸೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವಂಡ್ಸೆ ನಿವಾಸಿ ಶಶಿಕಲಾ (52) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಸುಮಾರು 7:15ರ ವೇಳೆಗೆ ಶಶಿಕಲಾ ಅವರು ಹತ್ತಿರದ ಅಂಗಡಿಯಿಂದ ದಿನಸಿ ಪದಾರ್ಥಗಳನ್ನು ಖರೀದಿಸಲು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕೊಲ್ಲೂರಿನಿಂದ ಕುಂದಾಪುರ ಕಡೆಗೆ ಅತೀ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಶಶಿಕಲಾ ಅವರು ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದಾರೆ. ಮಹಿಳೆಗೆ ಡಿಕ್ಕಿ ಹೊಡೆದ ಕಾರು ಕೂಡ ನಿಯಂತ್ರಣ ತಪ್ಪಿ ರಸ್ತೆಯಿಂದ ಆಚೆಗಿದ್ದ ಚರಂಡಿಗೆ ಬಿದ್ದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಶಿಕಲಾ ಅವರನ್ನು ತಕ್ಷಣವೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!