ಮಂಗಳೂರು: ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಕಾಮ್ ಶರೀಫ್‌ನಲ್ಲಿ ಹಜ್ರತ್ ಸೂಫಿ ಶಹೀದ್ (ರ) ಮತ್ತು ಸಯ್ಯಿದ್ ಹಸನ್ ಸಖಾಫ್ ಅಲ್ ಹದ್ದಾದಿ (ರ) ಹಾಗೂ ಇತರ ಔಲಿಯಾಗಳ ಹೆಸರಿನಲ್ಲಿ ನಡೆಯುವ ಉರೂಸ್ ಮುಬಾರಕ್ ಈ ವರ್ಷ ಏಪ್ರಿಲ್ 17 ರಿಂದ ಏಪ್ರಿಲ್ 24 ರವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ ಎಂದು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎಂ. ಹುಸೈನ್ ಸಖಾಫಿ ಅವರು ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್ 17 ರಂದು ಶುಕ್ರವಾರ ಜುಮಾ ನಮಾಜಿನ ನಂತರ ಅಧ್ಯಕ್ಷ ಕೆ.ಎಂ. ಹುಸೈನ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಳ್ ಅವರು ಉರೂಸ್ ಉದ್ಘಾಟಿಸಲಿದ್ದಾರೆ. ವೇದಿಕೆಯಲ್ಲಿ ನಾಯಿಬ್ ಖಾಜಿ ಅಬ್ದುಲ್ಲಾ ಫೈಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಏಪ್ರಿಲ್ 17 (ರಾತ್ರಿ): ಮುದರಿಸ್ ಎ.ಪಿ ಹಂಸ ಸಖಾಫಿ ಅವರಿಂದ ಮುಖ್ಯ ಭಾಷಣ. ರಿಫಾಯಿ ರಾತೀಬ್ ಸಯ್ಯಿದ್ ಸಾದತ್ ಕಾಪಾಡ್ ನೇತೃತ್ವದಲ್ಲಿ ನಡೆಯಲಿದೆ.
ಏಪ್ರಿಲ್ 18 (ರಾತ್ರಿ): ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ಅವರ ನೇತೃತ್ವದಲ್ಲಿ ರಾತೀಬ್ ಮತ್ತು ಮುಸ್ತಫಾ ಸಖಾಫಿ ತೆನ್ನಲ ಅವರಿಂದ ಭಾಷಣ.
ಏಪ್ರಿಲ್ 19 (ರಾತ್ರಿ): ಸಯ್ಯಿದ್ ಶಿಹಾಬುದ್ದೀನ್ ಮುತ್ತನ್ನೂರು ತಂಗಳ್ ನೇತೃತ್ವದಲ್ಲಿ ಖತಂ ದುಆ ಮತ್ತು ಮೌಲಾನಾ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಅವರಿಂದ ಪ್ರವಚನ.

ಏಪ್ರಿಲ್ 20 ರಂದು ನಡೆಯಲಿರುವ ಸಾರ್ವಜನಿಕ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಭಾಪತಿ ಯು.ಟಿ. ಖಾದರ್, ಸಚಿವರಾದ ಝುಮೀರ್ ಅಹ್ಮದ್, ಬಿ.ಎನ್. ಸುರೇಶ್ ಬಾಬು ಸೇರಿದಂತೆ ಹಲವು ರಾಜಕೀಯ ಮತ್ತು ಸಾಮಾಜಿಕ ನಾಯಕರು ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ 24 ರಂದು ಮಧ್ಯಾಹ್ನ 2:00 ಗಂಟೆಗೆ ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಯ್ಯಿದ್ ಇಲ್ಯಾಸ್ ಅಲ್ ಹೈದರೂಸಿ ಸಮ್ಮೇಳನ ಉದ್ಘಾಟಿಸಲಿದ್ದು, ಖ್ಯಾತ ವಕೀಲರಾದ ಹುಸೈನ್ ಸಖಾಫಿ ಚುಳ್ಳಿಕೋಡ್ ಮುಖ್ಯ ಭಾಷಣ ಮಾಡಲಿದ್ದಾರೆ. ಲಕ್ಷಾಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವೂ ಜರುಗಲಿದೆ ಎಂದವರು ವಿವರಿಸಿದರು.
ಪ್ರಮುಖರಾದ ಬಿಎ ಅಬ್ದುಲ್ ರಹಿಮಾನ್, ಅಶ್ರಫ್ ಎಮ್ಮೆಮಾಡು ಉಪಸ್ಥಿತರಿದ್ದರು