ಏಪ್ರಿಲ್ 18-19: ಮಂಗಳೂರಿನಲ್ಲಿ ಲಯನ್ಸ್ ಜಿಲ್ಲೆ 317D ಸಮ್ಮೇಳನ; ವಿವಿಧ ಜನಪರ ಸೇವಾ ಯೋಜನೆಗಳ ಅನಾವರಣ

ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317D ವತಿಯಿಂದ ಸಮಗ್ರ ಜಿಲ್ಲಾ ಸಮ್ಮೇಳನವು (Convention) ಏಪ್ರಿಲ್ 18 ಮತ್ತು 19ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಅವರು ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಜಿಲ್ಲಾ ರಾಜ್ಯಪಾಲರಾದ ಲಯನ್ ಕುಡ್ಪಿ ಅರವಿಂದ ಶೆಣೈ ಅವರ ಸಮರ್ಥ ನಾಯಕತ್ವದಲ್ಲಿ ಈ ಬಾರಿ “ಏಂಜೆಲ್ಸ್ ಆಫ್ ಸರ್ವಿಸ್” ಎನ್ನುವ ಧ್ಯೇಯವಾಕ್ಯದೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು

ಈ ಬಾರಿಯ ಜಿಲ್ಲಾ ಸಮ್ಮೇಳನವನ್ನು ಜಿಲ್ಲೆಯ ಪ್ರಥಮ ಮಹಿಳೆ ಮಮತಾ ಶೆಣೈ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ ಹಾಗೂ ವಂಶಿದರ್ ಬಾಬು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿದ್ವಾನ್ ಸಿ.ಎಸ್. ನಟೇಶ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ನಿಕಟಪೂರ್ವ ಗವರ್ನರ್ ಭಾರತಿ ಬಿ.ಎಂ., ಪ್ರಥಮ ಉಪರಾಜ್ಯಪಾಲ ತಾರಾನಾಥ್ ಎಚ್.ಎಂ. ಮತ್ತು ದ್ವಿತೀಯ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದರು.

ಸಮ್ಮೇಳನದ ಅಂಗವಾಗಿ ಲಯನ್ಸ್ ಜಿಲ್ಲೆಯು ಎರಡು ಮಹತ್ವಾಕಾಂಕ್ಷೆಯ ಮೆಗಾ ಯೋಜನೆಗಳನ್ನು ಹಮ್ಮಿಕೊಂಡಿದೆ. ಮೊದಲನೆಯದಾಗಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ “ಮೊಬೈಲ್ ಕಿಚನ್” ಯೋಜನೆಯನ್ನು ಜಾರಿಗೆ ತರುತ್ತಿದ್ದು, ಇದರ ಮೂಲಕ ಇಸ್ಕಾನ್ ವತಿಯಿಂದ ನಡೆಯುವ ಆಹಾರ ಸರಬರಾಜು ವ್ಯವಸ್ಥೆಗೆ ಸಹಕಾರ ನೀಡಲಾಗುವುದು. ಎರಡನೆಯದಾಗಿ, “ಲಯನ್ಸ್ ವೃಕ್ಷ ಬೀಜಾಂಕುರ” ಎಂಬ ಪರಿಸರ ಉಳಿಸುವ ಕಾರ್ಯಕ್ರಮದಡಿ ಮುಡಿಪು ಮತ್ತು ಗುರುಪುರ ಕೈಕಂಬ ಹೆದ್ದಾರಿ ಬದಿಯಲ್ಲಿ ಪ್ರಾಥಮಿಕವಾಗಿ 1,000 ಗಿಡಗಳನ್ನು ನೆಡಲಾಗುವುದು. ಜಿಲ್ಲೆಯಾದ್ಯಂತ ಒಟ್ಟು 10,000 ಗಿಡಗಳನ್ನು ನೆಡುವ ಗುರಿಯನ್ನು ಸಂಘಟನೆ ಹೊಂದಿದೆ ಎಂದರು.

ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿರುವ ಲಯನ್ಸ್ ಜಿಲ್ಲೆ 317D, ಒಟ್ಟು 120 ಕ್ಲಬ್‌ಗಳ ಮೂಲಕ ಪ್ರತಿವರ್ಷ 6 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಈ ವರ್ಷ “ಬ್ಯೂಟಿಫುಲ್ ವರ್ಲ್ಡ್” ಹೆಸರಿನಲ್ಲಿ ರಕ್ತದಾನ, ಅಂಗಾಂಗ ದಾನ, ರಸ್ತೆ ಸುರಕ್ಷತೆ, ಮಹಿಳಾ ಸಬಲೀಕರಣ, ಮಧುಮೇಹ ಜಾಗೃತಿ ಮತ್ತು ಹಸಿವು ಮುಕ್ತ ಸಮಾಜಕ್ಕಾಗಿ ಒಟ್ಟು 13 ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಸುದರ್ಶನ್ ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಪ್ರಮುಖರಾದ ದೇವದಾಸ್‌ ಭಂಡಾರಿ, ಬಾಲಕೃಷ್ಣ ಹೆಗ್ಡೆ, ಚಂದ್ರಹಾಸ ರೈ ಹಾಗೂ ಮಂಗಳಗಂಗೋತ್ರಿಯ ರವಿರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!