ವೈಟ್ ಬೋರ್ಡ್ ವಾಹನಗಳಲ್ಲಿ ಶಾಲಾ ಮಕ್ಕಳ ಸಾಗಾಟ: ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು: ಖಾಸಗಿ ವಾಹನಗಳಲ್ಲಿ (ವೈಟ್ ಬೋರ್ಡ್) ನಿಯಮಬಾಹಿರವಾಗಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇಂತಹ ವಾಹನಗಳ ವಿರುದ್ಧ ಆರ್.ಟಿ.ಒ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್‌ ಪೂಜಾರಿ ಅಶೋಕನಗರ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಯಮದ ಪ್ರಕಾರ ಶಾಲಾ ಮಕ್ಕಳನ್ನು ಕೊಂಡೊಯ್ಯಲು ಹಳದಿ ಬೋರ್ಡ್ (Tourist/School Cab) ವಾಹನಗಳಿಗೆ ಮಾತ್ರ ಅವಕಾಶವಿದೆ. ನಾವು ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಆದರೆ, ಜಿಲ್ಲೆಯಲ್ಲಿ ಅನೇಕರು ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಬಳಸಿ ಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಈ ಹಿಂದೆ ಇಂತಹ ಖಾಸಗಿ ವಾಹನಗಳಿಂದ ಸಂಭವಿಸಿದ ಅಪಘಾತಗಳು ನಮಗೆ ಎಚ್ಚರಿಕೆಯ ಗಂಟೆಯಾಗಿವೆ,” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹಳದಿ ಬೋರ್ಡ್ ವಾಹನಗಳಿಗೆ ವರ್ಷಕ್ಕೆ ಸುಮಾರು 23,000 ರೂ. ಇನ್ಸೂರೆನ್ಸ್, ಸರ್ಕಾರದ ಹೊಸ ನಿಯಮದಂತೆ 14,000 ರೂ. ಬೆಲೆಯ ಪ್ಯಾನಿಕ್ ಬಟನ್ ಅಳವಡಿಕೆ ಹಾಗೂ ವಾರ್ಷಿಕ ತೆರಿಗೆಯನ್ನು ಪಾವತಿಸಲಾಗುತ್ತಿದೆ. ಆದರೆ ಯಾವುದೇ ತೆರಿಗೆ ಅಥವಾ ಸುರಕ್ಷತಾ ಕ್ರಮಗಳಿಲ್ಲದ ವೈಟ್ ಬೋರ್ಡ್ ವಾಹನಗಳು ಬಾಡಿಗೆಗೆ ಓಡುತ್ತಿರುವುದರಿಂದ ಪ್ರಾಮಾಣಿಕ ಚಾಲಕರಿಗೆ ಅನ್ಯಾಯವಾಗುತ್ತಿದೆ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ವಿವರಿಸಿದರು.

ಕಳೆದ 5-6 ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸತೀಶ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು. ಪೋಷಕರು ಕೂಡ ಎಚ್ಚೆತ್ತುಕೊಂಡು, ಸುರಕ್ಷತೆಯ ದೃಷ್ಟಿಯಿಂದ ವೈಟ್ ಬೋರ್ಡ್ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದು ಅವರು ವಿನಂತಿಸಿದರು.

ಪ್ರಮುಖ ಬೇಡಿಕೆಗಳು:
ವೈಟ್ ಬೋರ್ಡ್ ವಾಹನಗಳ ಮೇಲೆ ನಿಗಾ ಇಟ್ಟು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು.
ಅಂತಹ ವಾಹನಗಳನ್ನು ಕಡ್ಡಾಯವಾಗಿ ಟೂರಿಸ್ಟ್ ವಾಹನಗಳನ್ನಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಈ ನಿಯಮ ಪಾಲಿಸುವಂತೆ ಸರ್ಕಾರ ಆದೇಶಿಸಬೇಕು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್‌ ಪೂಜಾರಿ, ಗೌರವಾಧ್ಯಕ್ಷ ಸುನಿಲ್‌ ಕುಮಾರ್‌ ಬಜಾಲ್‌, ಮತ್ತು ಸ್ಥಾಪಕ ಅಧ್ಯಕ್ಷ ಮೋಹನ್‌ ಕುಮಾರ್‌ ಅತ್ತಾವರ ಉಪಸ್ಥಿತರಿದ್ದರು.

error: Content is protected !!