ಮುಸ್ಲಿಂ ಬಂಧುಗಳಿಂದ ಪಾಕಶಾಲೆ, ಕ್ರೈಸ್ತ ಬಂಧುಗಳಿಂದ ಸಭಾಂಗಣ-ಪಾರ್ಕಿಂಗ್‌ ವ್ಯವಸ್ಥೆ: ಹಿಂದೂ ಯುವ ಸೇನೆಯ ನೇತೃತ್ವದಲ್ಲಿ ಕುಲಶೇಖರ ಶನೈಶ್ಚರ ದೇವರಿಗೆ ಬ್ರಹ್ಮಕಲಶೋತ್ಸವ

ಮಂಗಳೂರು: ನಗರದ ಪದವು ಕುಲಶೇಖರದಲ್ಲಿ ಹಿಂದೂ ಯುವಸೇನಾ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಪೂರ್ಣ ಪ್ರಮಾಣದ ತಯಾರಿಗಳು ನಡೆದಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಮಾತನಾಡಿದ ಅವರು, “ಇಲ್ಲಿರುವುದು ಸಣ್ಣ ಜಾಗವಾದರೂ ನಮ್ಮ ಕಲ್ಪನೆಯನ್ನೂ ಮೀರಿ ಭಕ್ತರು ಬರುವ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ರೋಹನ್ ಅವರು ತಮ್ಮ ‘ಪ್ಲಾಮಾ’ ಕಟ್ಟಡವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದು, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಪಕ್ಕದಲ್ಲೇ ಒಬ್ಬ ಕ್ರೈಸ್ತ ಬಂಧು ಜಾಗ ನೀಡಿದ್ದು, ಅಲ್ಲಿ ಸಭಾಂಗಣದ ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ಬಂಧುವೊಬ್ಬರು ನೀಡಿದ ಜಾಗದಲ್ಲಿ ಪಾಕಶಾಲೆಯನ್ನು ಸಿದ್ಧಪಡಿಸಲಾಗಿದ್ದು, ಊಟದ ವ್ಯವಸ್ಥೆಗೆ ವಿಶಾಲವಾದ ಜಾಗವನ್ನು ಕಲ್ಪಿಸಲಾಗಿದೆ ಎಂದರು.
ಅನ್ನ ಸಂತರ್ಪಣೆಗೆ ಇನ್ನೂ ಎರಡು ಹೆಚ್ಚುವರಿ ಜಾಗಗಳನ್ನು ಗುರುತಿಸಲಾಗಿದೆ. ದೇವಸ್ಥಾನದ ಮುಂಭಾಗ ಖರೀದಿಸಿದ ಹಾಗೂ ಖರೀದಿಸಬೇಕಾದ ಜಾಗದಲ್ಲಿ ದೊಡ್ಡದಾದ ಯಾಗಶಾಲೆಯನ್ನು ಹಾಕಲಾಗಿದೆ. ವಾಹನಗಳ ದಟ್ಟಣೆ ನಿಯಂತ್ರಿಸಲು ʻಒನ್‌ವೇ’ ವ್ಯವಸ್ಥೆ ಮಾಡಲಾಗಿದ್ದು, ಪದವು ಮೇಗಿನಮನೆಯ ಕೆಳಗಿನ ಗ್ರೌಂಡ್ ಸೇರಿದಂತೆ ಒಟ್ಟು ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಮುಂದಿನ ಹಾಲ್‌ನಲ್ಲಿ ಹೊರೆಕಾಣಿಕೆ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಧಾರ್ಮಿಕ ಕಾರ್ಯಕ್ರಮಗಳ   ವಿವರ:
ಏಪ್ರಿಲ್ 18ರಿಂದ 24ರ ವರೆಗೆ ಬಾಲಂಭಟ್ ಮನೆತನದ ವಿದ್ವಾನ್ ವೇದಮೂರ್ತಿ ಎಂ. ಗಿರಿಧರ ಭಟ್ ಮತ್ತು ವೇದಮೂರ್ತಿ ಡಾ| ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಏಪ್ರಿಲ್ 18ರ ಶನಿವಾರದಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿವೆ. ಅಂದಿನಿಂದ ಏಪ್ರಿಲ್ 22ರ ತನಕ 108 ಕಾಯಿ ಗಣಯಾಗ, ರುದ್ರಯಾಗ ಹಾಗೂ ಲಕ್ಷ್ಮೀನಾರಾಯಣ ಪ್ರಧಾನ ಹೋಮಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಏಪ್ರಿಲ್ 23, ಗುರುವಾರದಂದು ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ ಹಾಗೂ ನವಗ್ರಹ ಸಹಿತ ಶ್ರೀ ಶನೈಶ್ಚರ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ. ಇದರೊಂದಿಗೆ ಶಿಖರ ಕಲಶ ಪ್ರತಿಷ್ಠೆ ಮತ್ತು ಶ್ರೀ ದೇವರಿಗೆ ಪಂಚಕಲಶ ಸಹಿತ ಬ್ರಹ್ಮಕಲಶಾಭಿಷೇಕವು ಅತ್ಯಂತ ವೈಭವದಿಂದ ಜರುಗಲಿದೆ.


ಏಪ್ರಿಲ್ 24ರಂದು ಚಂಡಿಕಾಯಾಗ ಹಾಗೂ ಸಗ್ರಹ ಶನೈಶ್ಚರ ಮಹಾಯಾಗದ ಪೂರ್ಣಾಹುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಉತ್ಸವದ ಪ್ರತಿದಿನವೂ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ, ವಿದ್ವಾಂಸರಿಂದ ಧಾರ್ಮಿಕ ಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನೂತನ ದೇವಾಲಯ

ಸಾಂಸ್ಕೃತಿಕ ಕಾರ್ಯಕ್ರಮಗಳು:
ಉತ್ಸವದ ಭಾಗವಾಗಿ ಶ್ರೀ ಪಾವಂಜಿ ಮೇಳದವರಿಂದ ಯಕ್ಷಗಾನ, ಶ್ರೀ ಲಲಿತೆ ಕಲಾವಿದರಿಂದ “ಶನಿ ಮಹಾತ್ಮೆ” ನಾಟಕ, ಸೌದಾಮಿನಿ ರಾವ್ ಮತ್ತು ಬಳಗದಿಂದ “ನೃತ್ಯರಂಜಿನಿ”, ವಿಧಾತ್ರಿ ಕಲಾವಿದರಿಂದ “ಜೈ ಹನುಮಾನ್” ಸಿನೆ ನಾಟಕ ಹಾಗೂ ಜಗದೀಶ್ ಕಟೀಲು ಸಂಯೋಜನೆಯಲ್ಲಿ “ಭಕ್ತಿಸಂಗೀತ ಲಹರಿ” ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.

ತನು-ಮನ-ಧನದ ಸಹಕಾರಕ್ಕೆ ಶಾಸಕ ಕಾಮತ್‌ ಮನವಿ


ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ನಗರದ ಈ ಭಾಗದಲ್ಲಿ ಪ್ರಪ್ರಥಮವಾಗಿ ಶನೈಶ್ಚರ ಮಂದಿರವು ನಿರ್ಮಾಣವಾಗಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗೊಂಡಿದ್ದು, ಮಂಗಳೂರು ನಗರದ ಜನತೆ ಈ ಪವಿತ್ರ ಕಾರ್ಯಕ್ಕೆ ತನು-ಮನ-ಧನದ ಸಹಕಾರ ನೀಡಬೇಕೆಂದು ಅವರು ಶಾಸಕನಾಗಿ ವಿನಂತಿಸಿಕೊಂಡರು.

ಜಾಹೀರಾತು

ನಳಿನ್ ಕುಮಾರ್ ಕಟೀಲ್ ಅವರು ಮುಂಬೈಗೆ ತೆರಳಿ ಅಲ್ಲಿನ ದಾನಿಗಳೊಂದಿಗೆ ಸಭೆ ನಡೆಸಿ ವಿಶೇಷ ಸಹಕಾರವನ್ನು ತಂದಿದ್ದಾರೆ ಎಂದರು. ದೇವಸ್ಥಾನದ ಇತಿಹಾಸವನ್ನು ಸ್ಮರಿಸಿದ ಅವರು, “ಆರಂಭದಲ್ಲಿ ರಾಮಚಂದ್ರ ಚೌಟರು ಕೇವಲ ನಾಲ್ಕು ಸೆಂಟ್ಸ್ ಜಾಗದಲ್ಲಿ ದೇವರ ಭಾವಚಿತ್ರವನ್ನಿಟ್ಟು ಪೂಜೆ ಮಾಡುತ್ತಾ ಬಂದಿದ್ದರು. ನಂತರ 8 ಸೆಂಟ್ಸ್ ಜಾಗವನ್ನು ಖರೀದಿಸಲಾಯಿತು. ಇದೀಗ ಸಮಿತಿಯ ಮತ್ತು ಹಿಂದೂ ಯುವಸೇನೆಯ ಸಹಕಾರದಿಂದ ಇನ್ನೂ 20 ಸೆಂಟ್ಸ್ ಜಾಗವನ್ನು ಖರೀದಿ ಮಾಡಲಾಗುತ್ತಿದೆ. ಸ್ಥಳೀಯರ ಸಹಕಾರದಿಂದ ಪ್ರತಿ ಚದರ ಅಡಿ ಮತ್ತು ಸೆಂಟ್ಸ್ ಜಾಗದ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲರ ಒಗ್ಗಟ್ಟಿನ ಶ್ರಮದಿಂದ ಈ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿದೆ. ನಮ್ಮೆಲ್ಲರ ಕಷ್ಟಗಳನ್ನು ನಿವಾರಿಸಲು ಶನಿದೇವರ ಕೃಪೆ ಅತ್ಯಗತ್ಯ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ, ಪೂಜಾ ಸಮಿತಿ ಅಧ್ಯಕ್ಷ ರಾಮಚಂದ್ರ ಚೌಟ, ಮಾತೃ ಮಂಡಳಿ ಅಧ್ಯಕ್ಷೆ ವಿಜಯ ಅರುಣ ಹಾಗೂ ಮೋನಪ್ಪ ಭಂಡಾರಿ, ಶಕೀಲ ಕಾವ, ಕಾವ್ಯ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

ದೇವಸ್ಥಾನದ ಹಿನ್ನೆಲೆ ಮತ್ತು ಮಹಾಯಾಗಗಳ ಇತಿಹಾಸ:

ಶನಿ ದೇವರ ಭಾವಚಿತ್ರ
ಶನಿ ದೇವರ ಭಾವಚಿತ್ರ

ಹಿಂದೂ ಯುವಸೇನೆ ಪದವು ಶಾಖೆಯ ಧಾರ್ಮಿಕ ವಿಭಾಗವಾಗಿ ಕಳೆದ ಎರಡೂವರೆ ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶನೈಶ್ಚರ ಪೂಜಾ ಸಮಿತಿ (ರಿ.)ಯು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬಾಲಂಭಟ್ ಮನೆತನದ ವೇದಮೂರ್ತಿ ನಾರಾಯಣ ಭಟ್ ಅವರ ಮಾರ್ಗದರ್ಶನದಲ್ಲಿ 2000 ಹಾಗೂ 2018ರಲ್ಲಿ ‘ಶ್ರೀ ಸಗ್ರಹ ಮುಖ ಶನೈಶ್ಚರ ಮಹಾಯಾಗ’ವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತು. ಏಳು ದಿನಗಳ ಕಾಲ ನಿರಂತರವಾಗಿ ನಡೆದ ಈ ಮಹಾಯಾಗವು ಧಾರ್ಮಿಕ ವಲಯದಲ್ಲಿ ಒಂದು ಸುದೀರ್ಘ ಇತಿಹಾಸ ಹಾಗೂ ಚರಿತ್ರೆಯನ್ನು ನಿರ್ಮಿಸಿದ ಕಾರ್ಯಕ್ರಮವಾಗಿ ದಾಖಲಾಗಿದೆ.

ಶನಿ ದೇವರ ಮೂಲ ಗುಡಿ
ಶನಿ ದೇವರ ಮೂಲ ಗುಡಿ

ಮಂಗಳೂರಿನ ಕುಲಶೇಖರದ ಪದವು ಮೇಗಿನಮನೆ ಬಳಿ 2010ರಲ್ಲಿ ಕೇವಲ 600 ಚದರ ಅಡಿಯಲ್ಲಿ ಶ್ರೀ ಶನೈಶ್ಚರ ಪೂಜಾ ಮಂದಿರವನ್ನು ನಿರ್ಮಿಸಿ, ಶನಿದೇವರ ಆರಾಧನೆಯನ್ನು ಆರಂಭಿಸಲಾಗಿತ್ತು. ಭಕ್ತರ ಸಂಖ್ಯೆ ಮತ್ತು ಕ್ಷೇತ್ರದ ಮಹಿಮೆ ಹೆಚ್ಚಾದಂತೆ, 2023ರಲ್ಲಿ ಶ್ರೀ ಶನೈಶ್ಚರ ದೇವಸ್ಥಾನ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕಾಗಿ 10 ಸೆಂಟ್ಸ್ ಸ್ಥಳವನ್ನು ಖರೀದಿಸಿ, ನೂತನ ಶಿಲಾಮಯ ಶ್ರೀ ಶನೈಶ್ಚರ ದೇವಸ್ಥಾನದ ಶಂಕುಸ್ಥಾಪನೆಯನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಗಿತ್ತು. ಕ್ಷೇತ್ರದ ಅಭಿವೃದ್ಧಿಯ ಸಂದರ್ಭದಲ್ಲಿ ನಡೆಸಲಾದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ, ನೂತನವಾಗಿ ನಿರ್ಮಾಣಗೊಂಡಿರುವ ಈ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ನವಗ್ರಹ ಸಹಿತ ಮುಖ್ಯ ಪ್ರಾಣದೇವರಾದ ಶ್ರೀ ಶನೈಶ್ಚರ, ವಿಘ್ನನಿವಾರಕ ಶ್ರೀ ಮಹಾಗಣಪತಿ ಹಾಗೂ ಶಕ್ತಿಸ್ವರೂಪಿಣಿ ಶ್ರೀ ದುರ್ಗಾದೇವಿಯನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಗುತ್ತದೆ.

error: Content is protected !!