ಮಲ್ಪೆ ಬಂದರಿನಲ್ಲಿ ನಾಪತ್ತೆಯಾಗಿದ್ದ ಒಡಿಶಾ ಮೂಲದ ಮೀನುಗಾರ ಶವವಾಗಿ ಪತ್ತೆ

ಉಡುಪಿ: ಕಳೆದ ಮಾರ್ಚ್ ಅಂತ್ಯದಿಂದ ನಾಪತ್ತೆಯಾಗಿದ್ದ ಒಡಿಶಾ ಮೂಲದ ಮೀನುಗಾರನೊಬ್ಬನ ಮೃತದೇಹವು ಭಾನುವಾರ (ಏಪ್ರಿಲ್ 12) ಮಲ್ಪೆ ಮೀನುಗಾರಿಕಾ ಬಂದರಿನ ಟಿ-ಡಾಕ್ ಬಳಿ ನೀರಿನಲ್ಲಿ ಪತ್ತೆಯಾಗಿದೆ.

ಮೃತರನ್ನು ಒಡಿಶಾ ಮೂಲದ ಸನಾತನ ಕಿಸಾನ್ (35) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯ ‘ಈಶನಿಧಿ’ ಎಂಬ ಮೀನುಗಾರಿಕಾ ಬೋಟಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮೀನುಗಾರಿಕಾ ಚಟುವಟಿಕೆಗಳು ಕ್ಷೀಣಿಸಿದ ಕಾರಣ, ಬೋಟನ್ನು ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿತ್ತು.

ಮಾರ್ಚ್ 31ರಂದು ರಾತ್ರಿ ಸುಮಾರು 9:30ರ ವೇಳೆಗೆ ಸನಾತನ ಅವರು ಬೋಟಿನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆದರೆ, ಮರುದಿನ ಬೆಳಿಗ್ಗೆ ಅವರು ಬೋಟಿನಲ್ಲಿ ಇಲ್ಲದಿರುವುದು ಕಂಡುಬಂದಾಗ, ಸಹೋದ್ಯೋಗಿಗಳು ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಸುಮಾರು 12 ದಿನಗಳ ಕಾಲ ಪತ್ತೆಯಾಗದ ಸನಾತನ ಅವರ ಮೃತದೇಹವು ಭಾನುವಾರ ಜೆಟ್ಟಿ ಬಳಿ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಬೋಟ್ ಬಂದರಿನಲ್ಲಿ ಲಂಗರು ಹಾಕಿದ್ದ ಸಂದರ್ಭದಲ್ಲಿ ಅವರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.

ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!