ಕೋಟೆಕಾರಲ್ಲಿ 500 ವರ್ಷಗಳ ಹಳೆಯ ನಾಗಶಿಲೆ ಪತ್ತೆ: ತಾಂಬೂಲ ಪ್ರಶ್ನೆಯಲ್ಲಿ ಬಯಲಾಯ್ತು ‘ನಾಗಮಣಿ’ ರಹಸ್ಯ

ಮಂಗಳೂರು: ಕರಾವಳಿಯ ಮಣ್ಣಿನಲ್ಲಿ ನಾಗಾರಾಧನೆ ಎನ್ನುವುದು ಕೇವಲ ಆಚರಣೆಯಲ್ಲ, ಅದೊಂದು ನಂಬಿಕೆಯ ಬೆನ್ನೆಲುಬು. ಮಂಗಳೂರಿನ ಹೊರವಲಯದ ಕೋಟೆಕಾರು ಗ್ರಾಮದ ಕಚಾರು ಎಂಬ ಪುಟ್ಟ ಪ್ರದೇಶದಲ್ಲಿ ಈಗ ಸುಮಾರು 500 ವರ್ಷಗಳ ಇತಿಹಾಸವಿರುವ ಒಂದು ಪುರಾತನ ನಾಗಶಿಲೆ ದಾರುಣ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಲಚಕ್ರದ ಉರುಳುತ್ತಿದ್ದಂತೆ ನೆರೆಹಾವಳಿಗೆ ಸಿಲುಕಿ, ಹೂಳು ತುಂಬಿ ಮಣ್ಣು ಪಾಲಾಗಿದ್ದ ಈ ನಾಗಬನ ಈಗ ಮೆಲ್ಲಗೆ ಕಣ್ಣು ಬಿಡುತ್ತಿದೆ!

ಒಂದು ಕಾಲದಲ್ಲಿ ಭಕ್ತಿ ಭಾವದಿಂದ ಪೂಜಿಸಲ್ಪಡುತ್ತಿದ್ದ ಈ ನಾಗಬನ ಇಂದು ಕಸ ಕಡ್ಡಿಗಳ ಗೂಡಾಗಿದೆ. ಅಕ್ಕಪಕ್ಕದಲ್ಲಿ ಭೂಮಿ ಸಮತಟ್ಟು ಮಾಡುವ ನೆಪದಲ್ಲಿ ಸುರಿಯಲಾದ ಮಣ್ಣು ಮತ್ತು ನಿರಂತರವಾದ ನೆರೆಯ ಹೊಡೆತಕ್ಕೆ ಈ ಪವಿತ್ರ ತಾಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ನಾಗಶಿಲೆಗಳು ಮೂಲೆಗುಂಪಾಗಿ, ನಿರ್ಲಕ್ಷ್ಯದ ಕರಾಳ ಛಾಯೆ ಇಲ್ಲಿ ಆವರಿಸಿದೆ. ಈ ದುಸ್ಥಿತಿಯನ್ನು ಕಂಡ ಕಚಾರು ನಾಗನಕಟ್ಟೆ ಸಮಿತಿಯ ಸದಸ್ಯರು ಈಗ ಈ ಜಾಗದ ಜೀರ್ಣೋದ್ಧಾರಕ್ಕೆ ಸಂಕಲ್ಪ ಮಾಡಿದ್ದಾರೆ.

ತಾಂಬೂಲ ಪ್ರಶ್ನೆಯಲ್ಲಿ ಸಿಕ್ಕ ನಾಗಮಣಿಯ ಸುಳಿವು!
ಶೃಂಗೇರಿ ಮಠದ ಧರ್ಮಾಧಿಕಾರಿ ಬೋಳ್ಳಾವ ಸತ್ಯಶಂಕರ ಭಟ್ಟರ ಆಶೀರ್ವಾದದೊಂದಿಗೆ ನಡೆದ ತಾಂಬೂಲ ಪ್ರಶ್ನೆಯಲ್ಲಿ ಬೆಚ್ಚಿಬೀಳಿಸುವ ಸತ್ಯವೊಂದು ಹೊರಬಂದಿದೆ. ಈ ಪವಿತ್ರ ನೆಲದಲ್ಲಿ ನಾಗಮಣಿಯನ್ನು ಹೊಂದಿರುವ ಅತ್ಯಂತ ಶಕ್ತಿಯುತ ನಾಗದೇವತೆಯ ಸನ್ನಿಧಿ ಇದೆ ಎಂಬುದು ಜ್ಯೋತಿಷ್ಯದಲ್ಲಿ ದೃಢಪಟ್ಟಿದೆ! ಅಷ್ಟೇ ಅಲ್ಲ, ಇಲ್ಲಿ ಎರಡು ನಾಗಶಿಲೆಗಳಿದ್ದು ಅವುಗಳಲ್ಲಿ ಒಂದು ಹಾನಿಗೀಡಾಗಿದೆ ಹಾಗೂ ಇದರ ರಕ್ಷಣೆಗಾಗಿ ಕ್ಷೇತ್ರಪಾಲನ ಕಲ್ಲು ಕೂಡ ಅಲ್ಲೇ ಅಡಗಿದೆ ಎನ್ನುವ ರಹಸ್ಯ ಬಯಲಾಗಿದೆ.

ಈ ಪವಿತ್ರ ಕ್ಷೇತ್ರವನ್ನು ಹೀಗೆಯೇ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅರಿಷ್ಟಗಳು ಉಂಟಾಗಬಹುದು ಎಂದು ದೈವಜ್ಞರು ಎಚ್ಚರಿಸಿದ್ದಾರೆ. ಇದನ್ನರಿತ ಬಾಲಕೃಷ್ಣ ಕಚಾರು ಮತ್ತು ನಾರಾಯಣ ಕಚಾರು ನೇತೃತ್ವದ ತಂಡ ಈಗಾಗಲೆ ಈ ನಾಗಬನದ ಶುದ್ಧೀಕರಣಕ್ಕಾಗಿ ಹೋಮ-ಹವನ ಹಾಗೂ ಪೂಜೆಗಳನ್ನು ನೆರವೇರಿಸಿದೆ. ಪಂಚಶತಮಾನದ ಹಳೆಯ ಈ ಪರಂಪರೆಯನ್ನು ಕಾಪಾಡಲು ಇಡೀ ಊರೇ ಈಗ ಒಂದಾಗಿದೆ.

ನಾಗಮಣಿಯ ಶಕ್ತಿ ಮತ್ತು 500 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವು ಮರುಜನ್ಮ ಪಡೆದರೆ ಮಾತ್ರ ಕಚಾರು ಗ್ರಾಮಕ್ಕೆ ಒಂದು ಶಾಶ್ವತವಾದ ರಕ್ಷಾ ಕವಚ ಸಿಕ್ಕಂತಾಗುತ್ತದೆ

error: Content is protected !!