ಮಂಗಳೂರು: ನಗರದ ನಂತೂರು ಜಂಕ್ಷನ್ ಬಿಕರ್ನಕಟ್ಟೆಯಿಂದ ಪಡೀಲ್ ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್‌ನಿಂದ ರಸ್ತೆಯುದ್ದಕ್ಕೂ ಆಯಿಲ್ (ತೈಲ) ಸೋರಿಕೆಯಾದ ಪರಿಣಾಮವಾಗಿ, ದ್ವಿಚಕ್ರ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಈ ಪೈಕಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.

ಟ್ಯಾಂಕರ್‌ನಿಂದ ಚೆಲ್ಲಿದ್ದ ತೈಲದಿಂದಾಗಿ ರಸ್ತೆಯು ಅಂಟಂಟಾಗಿ ದ್ವಿಚಕ್ರವಾಹನಗಳ ಟೈರ್‌ಗಳು ಸ್ಲಿಪ್ ಆಗಿ ಸ್ಕಿಡ್ ಆಗುತ್ತಿದೆ. ಇದರಿಂದ ಆ ಮಾರ್ಗವಾಗಿ ಚಲಿಸುತ್ತಿದ್ದ ಅನೇಕ ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಪಲ್ಟಿಯಾಗಿವೆ. ಈ ಸರಣಿ ಅಪಘಾತದಲ್ಲಿ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಿರ್ಲಕ್ಷ್ಯದಿಂದ ಆಯಿಲ್ ಸೋರಿಕೆ ಮಾಡುತ್ತಾ ಸಾಗಿದ ಟ್ಯಾಂಕರ್ ಚಾಲಕನ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಟ್ಯಾಂಕರ್‌ನಿಂದ ಆಯಿಲ್ ಸೋರಿಕೆಯಾಗುತ್ತಿದ್ದರೂ ಗಮನಿಸದೆ ಸಾಗಿದ್ದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗಿದೆ” ಎಂದು ಸ್ಥಳೀಯರು ದೂರಿದ್ದಾರೆ.
ಘಟನೆಯಿಂದಾಗಿ ಬಿಕರ್ನಕಟ್ಟೆ-ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದ್ದು, ರಸ್ತೆಯಲ್ಲಿರುವ ಆಯಿಲ್ ತೆರವು ಮಾಡಬೇಕಿದೆ.
ಸ್ಥಳೀಯರೇ ಆಯಿಲ್ ಬಿದ್ದಲ್ಲಿ ಮಣ್ಣು ಹಾಕಿ ಅಪಘಾತ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ. ಆದರೆ ಪೊಲೀಸರು ಅಪಘಾತ ನಡೆಯದಂತೆ ದ್ವಿಚಕ್ರ ಸವಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.