
ಕ್ಯಾಲಿಫೋರ್ನಿಯಾ: ಸುಮಾರು ಐದು ದಶಕಗಳ ದೀರ್ಘ ವಿರಾಮದ ಬಳಿಕ ಚಂದ್ರನತ್ತ ಮಾನವಯಾನ ಪುನರಾರಂಭಿಸಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಮಹತ್ವಾಕಾಂಕ್ಷೆಯ ಆರ್ಟೆಮಿಸ್ II ಮಿಷನನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಓರಿಯನ್ ಬಾಹ್ಯಾಕಾಶ ನೌಕೆ ಭೂಮಿಗೆ ಸುರಕ್ಷಿತವಾಗಿ ಮರಳಿದ್ದು, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲ್ಯಾಶ್‌ಡೌನ್ ಮೂಲಕ ಇಳಿದಿದೆ.

ಈ ಮಿಷನ್‌ನ ಪ್ರಮುಖ ವೈಶಿಷ್ಟ್ಯವೆಂದರೆ, ಗಗನಯಾತ್ರಿಗಳು ಚಂದ್ರನ ಮೇಲ್ಮೈಗೆ ಇಳಿಯದೇ, ಅದರ ಕಕ್ಷೆಯಲ್ಲಿ ಸುತ್ತುಹಾಕಿ ಹಲವು ತಾಂತ್ರಿಕ ಪರೀಕ್ಷೆಗಳು ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಯಶಸ್ವಿಯಾಗಿ ನಡೆಸಿದ್ದು, ಭವಿಷ್ಯದ ಮಾನವ ಚಂದ್ರಯಾನಗಳಿಗೆ ಅಗತ್ಯವಾದ ಮಹತ್ವದ ಮಾಹಿತಿಯನ್ನು ಈ ಪ್ರಯಾಣ ಒದಗಿಸಿದೆ.

ಸುಮಾರು ಐದು ದಶಕಗಳ ನಂತರ ಮಾನವರನ್ನು ಚಂದ್ರನತ್ತ ಕಳುಹಿಸುವ ಯೋಜನೆಗೆ ಇದು ದೊಡ್ಡ ಮೈಲುಗಲ್ಲಾಗಿದ್ದು, ಮುಂದಿನ ಆರ್ಟೆಮಿಸ್ III ಮಿಷನ್‌ಗೆ ಭದ್ರ ಬುನಾದಿ ನಿರ್ಮಿಸಿದೆ. ಈ ಮಿಷನ್ ಮೂಲಕ ಮನುಷ್ಯರನ್ನು ಮತ್ತೆ ಚಂದ್ರನ ಮೇಲ್ಮೈಗೆ ಇಳಿಸುವ ಗುರಿಯನ್ನು ನಾಸಾ ಹೊಂದಿದೆ.

ಭೂಮಿಗೆ ಸುರಕ್ಷಿತವಾಗಿ ಮರಳಿದ ಗಗನಯಾತ್ರಿಗಳನ್ನು ನಾಸಾ ವಿಜ್ಞಾನಿಗಳು ಹಾಗೂ ನೌಕಾಪಡೆಯ ತಂಡ ಸಂಭ್ರಮದಿಂದ ಸ್ವಾಗತಿಸಿದರು. ಈ ಯಶಸ್ಸು ಅಮೇರಿಕಾದ ಬಾಹ್ಯಾಕಾಶ ಸಾಧನೆಗೆ ಹೊಸ ದಿಕ್ಕನ್ನು ನೀಡುವುದರ ಜೊತೆಗೆ, ಮಾನವ ಅನ್ವೇಷಣೆಯ ಭವಿಷ್ಯಕ್ಕೆ ದಾರಿದೀಪವಾಗಿದೆ.